ಅರಕಲಗೂಡು: ಮುಂಗಾರು ಮಳೆ ಅಬ್ಬರದಿಂದಾಗಿ ತಾಲೂಕಿನ ರಾಮನಾಥಪುರದಲ್ಲಿ ಕಾವೇರಿ ನದಿ ಪ್ರವಾಹದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರು ಅಧಿಕಾರಿಗಳೊಂದಿಗೆ ತೆರಳಿ ಕಾವೇರಿ ನದಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ನದಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ನದಿ ಪಕ್ಕದಲ್ಲಿ ನೆಲೆಸಿರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುವುದು. ಪ್ರವಾಹಕ್ಕೆ ಸಿಲುಕದಂತೆ ನಿವಾಸಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಮಳೆ ತೀವ್ರಗೊಂಡಿರುವ ಕಾರಣ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಕಂಡು ಬಂದರೆ ಕೂಡಲೇ ನಿವಾಸಿಗಳು ಸ್ಥಳಾಂತರವಾಗಲು ಸಿದ್ಧರಾಗಬೇಕು. ಸಂತ್ರಸ್ತರ ಸುರಕ್ಷತೆಗಾಗಿ ಕಾಳಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ಶಿರಸ್ತೇದಾರ್ ಸಿ. ಸ್ವಾಮಿ, ಗ್ರಾಪಂ ಪಿಡಿಒ ಕುಮಾರಸ್ವಾಮಿ, ರಾಜಸ್ವ ನಿರೀಕ್ಷಕ ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್ ಸಿಬ್ಬಂದಿ ಇದ್ದರು.