ಮಳವಳ್ಳಿ ತಾಲೂಕು ಹಲಗೂರು ಸಮೀಪದ ಮುತ್ತತ್ತಿಗೆ ಸೋಮವಾರ ಜಿಲ್ಲಾಧಿಕಾರಿ ಡಾ. ಕುಮಾರ ಭೇಟಿ ನೀಡಿ ಅಧಿಕಾರಿಗಳಿಂದ ನದಿಯ ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು. ಮಲ್ಲಿಕಾರ್ಜುನ ಬಾಲದಂಡಿ, ಶೇಖ್ ತನ್ವೀರ್ ಆಸಿಫ್, ಕೆ.ಎನ್.ಲೋಕೇಶ್, ವಾಸುದೇವ, ಮಲ್ಲಿಕಾರ್ಜುನ ಮತ್ತಿತರರಿದ್ದರು. 
ಜಿಲ್ಲೆ

ಕಾವೇರಿ ನದಿ ಪಾತ್ರದ ಜನರು ಎಚ್ಚರ ವಹಿಸಿ

ಮಾದೇಶ್ ತಿ.ನರಸೀಪುರ

ಹಲಗೂರು: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಹಲಗೂರು ಸಮೀಪದ ಪ್ರವಾಸಿ ತಾಣ ಮುತ್ತತ್ತಿಗೆ ಇತ್ತ್ತೀಚೆಗೆ ನೀಡಿ, ಕಂದಾಯ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಅವರು ಮಾತನಾಡಿದರು.

ಕಳೆದ ಹಲವು ದಿನಗಳಿಂದ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳು ಯಾವುದೇ ಸಮಯದಲ್ಲಾದರೂ ತುಂಬಿ ಹರಿಯಬಹುದು. ಪ್ರವಾಸಿಗರು ಕಾವೇರಿ ನದಿಗೆ ಇಳಿಯುವುದು, ಫೋಟೋ ತೆಗೆಯುವುದು ಮುಂತಾದ ಪ್ರಕ್ರಿಯೆಗಳಿಗೆ ಕೈ ಹಾಕಿ ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ಎಚ್ಚರಿಸಿದರು.

ಮುತ್ತತ್ತಿ ಅಂಜನೇಯಸ್ವಾಮಿ ದೇವಾಲಯಕ್ಕೆ ದಿನನಿತ್ಯ ಭಕ್ತಾದಿಗಳು ಆಗಮಿಸುತ್ತಿದ್ದು, ನದಿ ದಂಡೆಯಲ್ಲಿ ಪ್ರತಿದಿನವೂ ಹೋಮ್ ಗಾರ್ಡ್ ಸಿಬ್ಬಂದಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಸಾರ್ವಜನಿಕರು ಮತ್ತು ಭಕ್ತರು ಕಾವೇರಿ ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ನದಿ ದಂಡೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೃಹತ್ ಸೂಚನಾಫಲಕ ಅಳವಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ತಹಸೀಲ್ದಾರ್ ಕೆ.ಎನ್.ಲೋಕೇಶ್, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ವಾಸುದೇವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ, ರಾಜಸ್ವ ನಿರೀಕ್ಷಕ ಮಧುಸೂದನ್ ಮತ್ತಿತರರಿದ್ದರು.