ಮಡಿಕೇರಿ:
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕುಶಾಲನಗರ ತಾಲೂಕು ದುಬಾರೆಯಲ್ಲಿ ಪುನಾರಂಭಗೊಂಡಿರುವ ರ‌್ಯಾಫ್ಟಿಂಗ್ ಕ್ರೀಡೆಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೇಸಿಗೆ ಶುರುವಾಗುತ್ತಿದ್ದಂತೆಯೇ ಕಾವೇರಿ ನದಿಯಲ್ಲಿ ನೀರು ಬತ್ತಿಹೋಗಿ ರ‌್ಯಾಫ್ಟಿಂಗ್ ಬೋಟ್‌ಗಳು ದಡ ಸೇರಿದ್ದವು. ಇದೀಗ ಕಳೆದ ೧೦ ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿಗೆ ನಿಧಾನಕ್ಕೆ ಜೀವಕಳೆ ಬರುತ್ತಿರುವುದರಿಂದ ರ‌್ಯಾಫ್ಟಿಂಗ್ ಬೋಟ್‌ಗಳು ನದಿಯಲ್ಲಿ ಮತ್ತೆ ಕಾಣಿಸಿಕೊಂಡಿವೆ.
ಕೇವಲ ೧೫ ದಿನಗಳ ಹಿಂದಿನ ತನಕ ದುಬಾರೆಯಲ್ಲಿ ಬತ್ತಿಹೋಗಿ ಬಯಲಿನಂತೆ ಆಗಿದ್ದ ಕಾವೇರಿ ನದಿಯನ್ನು ನೋಡುತ್ತಾ, ’ಇನ್ನೇನು ಪ್ರವಾಸಿ ಸೀಸನ್ ಮುಗಿಯುತ್ತಾ ಬಂತು, ಈ ವರ್ಷದ ದುಡಿಮೆಗೆ ಕತ್ತರಿ ಬಿದ್ದಂತೆಯೇ ಸರಿ,’ ಎಂದು ಚಿಂತಿಸುತ್ತಾ ಕುಳಿತಿದ್ದ ರ‌್ಯಾಫ್ಟಿಂಗ್ ಬೋಟ್ ಮಾಲೀಕರು, ಕಾರ್ಮಿಕರ ನೋವಿಗೆ ಸ್ಪಂದನೆ ಎನ್ನುವಂತೆ ಈ ತಿಂಗಳ ಮಧ್ಯಭಾಗದಿಂದ ಮಳೆರಾಯ ಕೃಪೆ ತೋರಿಸುತ್ತಿರುವುದರಿಂದ ಕಾವೇರಿಯಲ್ಲಿ ಮತ್ತೆ ನೀರಿನ ಹರಿವು ಕಾಣಿಸಿಕೊಳ್ಳಲಾರಂಭಿಸಿದೆ. ಈ ಬೆನ್ನಲ್ಲೇ ದುಬಾರೆಯ ರ‌್ಯಾಫ್ಟಿಂಗ್ ಅಸೋಸಿಯೇಷನ್ ಇಲ್ಲಿ ಈಗ ಮತ್ತೆ ಆರಂಭಿಸಿರುವ ಸ್ಟಿಲ್‌ವಾಟರ್ ರ‌್ಯಾಫ್ಟಿಂಗ್ ಪ್ರವಾಸಿಗರನ್ನು ಸೆಳೆಯುತ್ತಿದೆ.
ಅರಣ್ಯ ಇಲಾಖೆಯ ಸಾಕಾನೆ ಶಿಬಿರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ದುಬಾರೆಯಲ್ಲಿ ೨೦೦೨ರಲ್ಲಿ ರಾಜ್ಯ ಸರ್ಕಾರವೇ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಿಗಮದ ಮೂಲಕ ರ‌್ಯಾಫ್ಟಿಂಗ್ ಕ್ರೀಡೆಯನ್ನು ಪರಿಚಯಿಸಿತ್ತು. ಆರಂಭದಿಂದಲೂ ಉತ್ತಮವಾಗಿಯೇ ನಡೆಯುತ್ತಾ ಬಂದು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆದಿದ್ದ ರ‌್ಯಾಫ್ಟಿಂಗ್ ನಂತರದ ಕೆಲವೇ ವರ್ಷಗಳಲ್ಲಿ ಕಾರಣಾಂತರದಿಂದ ರದ್ದುಗೊಂಡಿತ್ತು. ಈ ಸಾಹಸಿ ಜಲಕ್ರೀಡೆಗೆ ಪ್ರವಾಸಿಗರ ಉತ್ತಮ ಪ್ರತಿಕ್ರಿಯೆ ಗಮನಿಸಿದ್ದ ಸ್ಥಳೀಯ ಕೆಲವು ಉದ್ಯಮಿಗಳು ನಂತರದ ದಿನಗಳಲ್ಲಿ ಖಾಸಗಿಯಾಗಿ ದುಬಾರೆಯಲ್ಲಿ ರ‌್ಯಾಫ್ಟಿಂಗ್ ಶುರು ಮಾಡಿದ್ದರು.
ದುಬಾರೆ ಕಾವೇರಿ ನದಿಯಲ್ಲಿ ನಡೆಯುವ ವೈಟ್ ವಾಟರ್ ರಿವರ್ ರ‌್ಯಾಫ್ಟಿಂಗ್ ಪ್ರವಾಸಿಗರ ಪ್ರಮುಖ ಆಕರ್ಷಣೆ. ಇಲ್ಲಿ ಗುರುತಿಸಲಾಗಿರುವ ೭ ಕಿಮೀ ದೂರದ ಹಾದಿಯಲ್ಲಿ ರ‌್ಯಾಫ್ಟಿಂಗ್ ಕ್ರೀಡೆ ನಡೆಯುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿ ಮೈದುಂಬಿಕೊಂಡಿರುವ ದಿನಗಳು ವೈಟ್ ವಾಟರ್ ರಿವರ್ ರ‌್ಯಾಫ್ಟಿಂಗ್‌ಗೆ ಹೇಳಿ ಮಾಡಿಸಿದಂತಿರುತ್ತದೆ. ಕೆಲವೆಡೆ ನಿಧಾನಗತಿಯಲ್ಲಿ ಹರಿಯುವ ನದಿ, ಮತ್ತೆ ಕೆಲವೆಡೆ ವೇಗದ ಹರಿವು, ಬಂಡೆಗಳ ಮೇಲೆ ಹಾದು ಹೋಗುವ ನದಿ ರ‌್ಯಾಪ್ಟರ್‌ಗಳ ಸಾಹಸಕ್ಕೆ ಸವಾಲೊಡ್ಡುವಂತಿದ್ದು, ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತದೆ. ಆದರೆ ನದಿಯಲ್ಲಿ ಈಗ ಆ ಪ್ರಮಾಣದಲ್ಲಿ ನೀರಿಲ್ಲ. ಹಾಗಾಗಿ ಸದ್ಯಕ್ಕೆ ೧.೫ ಕಿಲೋ ಮೀಟರ್ ದೂರದ ಸ್ಟಿಲ್ ವಾಟರ್ ರ‌್ಯಾಫ್ಟಿಂಗ್ ನಡೆಸಲಾಗುತ್ತಿದೆ.
ಕಳೆದ ಮುಂಗಾರಿನಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಅಕ್ಟೋಬರ್ ವೇಳೆಗಾಗಲೇ ಕಾವೇರಿಯಲ್ಲಿ ನೀರಿನ ಹರಿವು ಕಡಿಮೆ ಆಗಿತ್ತು. ಹಾಗಾಗಿ ೨೦೨೩ರ ಮಳೆಗಾಲದಲ್ಲಿ ವೈಟ್ ವಾಟರ್ ರಿವರ್ ರ‌್ಯಾಫ್ಟಿಂಗ್‌ಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಬೇಸಿಗೆ ಮಳೆಯೂ ನಿರೀಕ್ಷೆಯಂತೆ ಬಾರದ ಕಾರಣ ಜನವರಿಯಿಂದಲೇ ನದಿಯಲ್ಲಿ ನೀರಿನ ಮಟ್ಟ ಕ್ಷೀಣವಾಗುತ್ತಾ ಬಂದಿತ್ತು. ಮಾರ್ಚ್‌ನಲ್ಲಿ ನೀರಿನ ಹರಿವು ಸ್ಥಗಿತವಾಗಿದ್ದರಿಂದ ಅಲ್ಲಿಯ ತನಕ ಕಾರ್ಯಾಚರಿಸುತ್ತಿದ್ದ ಸ್ಟಿಲ್ ವಾಟರ್ ರ‌್ಯಾಫ್ಟಿಂಗ್ ಕೂಡ ನಿಲ್ಲಿಸಬೇಕಾಯಿತು. ಹಾಗಾಗಿ ಮಹತ್ವದ ಪ್ರವಾಸಿ ಸೀಸನ್‌ನ ಸುಮಾರು ಎರಡೂವರೆ ತಿಂಗಳು ಕಾಲ ದುಬಾರೆ ಕಾವೇರಿ ನದಿಯಲ್ಲಿ ರಿವರ್ ರ‌್ಯಾಫ್ಟಿಂಗ್ ಸ್ತಬ್ಧವಾಗಿತ್ತು.
ದುಬಾರೆಯಲ್ಲಿ ಸಾಕಾನೆ ಶಿಬಿರವೇ ಪ್ರಮುಖ ಪ್ರವಾಸಿ ತಾಣ. ಇಲ್ಲಿರುವ ಆನೆಗಳ ಸ್ವಚ್ಛಂದತೆಗೆ ಅಡ್ಡಿಯಾಬಾರದು ಎನ್ನುವ ಉದ್ದೇಶದಿಂದ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲು ಅರಣ್ಯ ಇಲಾಖೆ ಸಮಯ ನಿಗದಿ ಮಾಡಿದೆ. ಬೆಳಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆ ತನಕ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಬಿಡುವುದಿಲ್ಲ. ದೂರದ ಪ್ರದೇಶಗಳಿಂದ ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಆನೆ ಶಿಬಿರಕ್ಕೆ ಪ್ರವೇಶ ಇಲ್ಲದಿದ್ದರೆ ನಿರಾಸೆಯಿಂದ ಮರಳಬೇಕು. ಇಂಥ ಸಂದರ್ಭದಲ್ಲಿ ಸ್ವಲ್ಪ ಖುಷಿ ಕೊಡುವುದು ಇಲ್ಲಿನ ರಿವರ್ ರ‌್ಯಾಫ್ಟಿಂಗ್ ಅನುಭವ. ಆದರೆ ಈ ಬೇಸಿಗೆಯಲ್ಲಿ ಪ್ರವಾಸಿಗರು ಇದರಿಂದಲೂ ವಂಚಿತರಾಗಿ ಖಾಲಿ ಅನುಭವದಿಂದ ಮರಳುವಂಥ ಸ್ಥಿತಿ ನಿರ್ಮಾಣ ಆಗಿತ್ತು.
ದುಬಾರೆಯಲ್ಲಿ ೭೬ ರ‌್ಯಾಫ್ಟಿಂಗ್ ಬೋಟ್‌ಗಳಿವೆ. ಇದಕ್ಕಾಗಿ ಸ್ಥಳೀಯರು ಸಾಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹೂಡಿದ್ದಾರೆ. ರ‌್ಯಾಫ್ಟಿಂಗ್ ಗೈಡ್‌ಗಳಾಗಿ ಕೆಲಸ ಮಾಡುವ ಮೂಲಕ ಸಾಕಷ್ಟು ಯುವಕರು ಸ್ಥಳೀಯವಾಗಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ವ್ಯಾಪ್ತಿಯ ಸುಮಾರು ಶೇ. ೮೦ರಷ್ಟು ನಿವಾಸಿಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರ‌್ಯಾಫ್ಟಿಂಗ್ ಉದ್ಯಮವನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಎರಡೂವರೆ ತಿಂಗಳ ಕಾಲ ರ‌್ಯಾಫ್ಟಿಂಗ್ ಉದ್ಯಮ ಸ್ಥಗಿತವಾಗಿದ್ದರಿಂದ ಈ ಉದ್ಯಮ ಅವಲಂಭಿಸಿರುವವರು ಆರ್ಥಿಕವಾಗಿ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಮಳೆ ಬಂದು, ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿ ರ‌್ಯಾಫ್ಟಿಂಗ್ ಕ್ರೀಡೆ ಪುನಾರಂಭ ಆಗಿರುವುದರಿಂದ ಇವರೆಲ್ಲಾ ನಿಟ್ಟುಸಿರುವ ಬಿಡುವಂತಾಗಿದೆ.
ಇಲ್ಲಿ ರ‌್ಯಾಫ್ಟಿಂಗ್ ಕ್ರೀಡೆ ಶಿಸ್ತು ಬದ್ಧ ವ್ಯವಸ್ಥೆಯಡಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ನೇರ ನಿಗಾವಣೆಯಲ್ಲಿ ಕಾರ್ಯಾಚರಿಸುತ್ತದೆ. ರ‌್ಯಾಫ್ಟಿಂಗ್ ಗೈಡ್‌ಗಳಾಗಿ ಕಾರ್ಯಾಚರಿಸುವ ಸ್ಥಳೀಯ ಯುವಕರು ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆಯಿಂದ ಮಾನ್ಯತೆ ಪಡೆದವರಿಂದ ರ‌್ಯಾಫ್ಟಿಂಗ್ ತರಬೇತಿ ಪಡೆದುಕೊಂಡಿರುತ್ತಾರೆ. ಇದರ ಜತೆಗೆ ರ‌್ಯಾಫ್ಟಿಂಗ್ ನಿರ್ವಹಿಸುವರು ತಮ್ಮಲ್ಲಿ ವಿಮಾ ಪ್ರಮಾಣ ಪತ್ರ, ಸಂಬಂಧಿಸಿದ ಪಂಚಾಯಿತಿಯ ಎನ್‌ಒಸಿ, ಪೊಲೀಸ್ ಇಲಾಖೆ ಅನುಮತಿ, ಅಗ್ನಿಶಾಮಕ ದಳದ ಎನ್‌ಒಸಿ, ಪಿಡಬ್ಯುಡಿ ಅನುಮತಿ, ಕಾರ್ಮಿಕ ಇಲಾಖೆಯಲ್ಲಿ ನೋಂದಾಣಿ, ಜಿಎಸ್‌ಟಿ, ಪಾನ್ ಕಾರ್ಡ್, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಿಂದ ರ‌್ಯಾಫ್ಟರ್‌ಗೆ ಫಿಟ್‌ನೆಸ್ ಸರ್ಟಿಫಿಕೇಟ್ ಹಾಗೂ ರ‌್ಯಾಫ್ಟರ್ ನಡೆಸುವ ಗೈಡ್‌ಗೆ ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆ ಅಂಗೀಕರಿಸಿದ ಸಂಸ್ಥೆಯಿಂದ ತರಬೇತಿ ಆಗಿರುವ ಸರ್ಟಿಫಿಕೇಟ್ ಹೊಂದಿರಬೇಕಾಗುತ್ತದೆ
ದುಬಾರೆಯಲ್ಲಿ ಕಾರ್ಯಾಚರಿಸುವ ರ‌್ಯಾಫ್ಟಿಂಗ್ ಕ್ರೀಡೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ನೇರ ನಿಗಾವಣೆ ಅಡಿಯಲ್ಲಿ ನಡೆಯುತ್ತದೆ. ಸ್ಟಿಲ್ ವಾಟರ್ ರ‌್ಯಾಫ್ಟ್ಟಿಂಗ್ ನಡೆಸುವ ರ‌್ಯಾಫ್ಟರ್‌ಗಳು ತಿಂಗಳಿಗೆ ೫ ಸಾವಿರ, ವೈಟ್ ವಾಟರ್ ರ‌್ಯಾಫ್ಟಿಂಗ್ ನಡೆಸುವ ರ‌್ಯಾಫ್ಟರ್‌ಗಳು ತಿಂಗಳಿಗೆ ೧೦ ಸಾವಿರ ರೂ. ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಗೆ ಪಾವತಿಸಬೇಕಾಗುತ್ತದೆ. ಹೀಗೆ ಸಂಗ್ರಹವಾಗುವ ಮೊತ್ತವನ್ನು ರ‌್ಯಾಫ್ಟಿಂಗ್ ನಡೆಯುವ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬಳಸಲಾಗುತ್ತದೆ. ರ‌್ಯಾಫ್ಟಿಂಗ್ ಕ್ರೀಡೆ ಸಾಮಾನ್ಯವಾಗಿ ವರ್ಷದಲ್ಲಿ ೨-೩ ತಿಂಗಳು
ವಿವಿಧ ಕಾರಣಗಳಿಗೆ ಕಾರ್ಯಾಚರಣೆ ನಡೆಸುವುದಿಲ್ಲ. ಇಂಥ ಸಂದರ್ಭದಲ್ಲಿ ಈ ಉದ್ಯಮ ಅವಲಂಭಿಸಿರುವವರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಹಾಗಾಗಿ ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಸ್ವಲ್ಪ ಭಾಗ ಇಂಥ ಸಂರ್ದಭದಲ್ಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಬಳಸಬೇಕು ಎನ್ನುವ ಅಭಿಪ್ರಾಯ ರ‌್ಯಾಫ್ಟಿಂಗ್ ಉದ್ಯಮಿಗಳಲ್ಲಿ ವ್ಯಕ್ತವಾಗುತ್ತಿದೆ.
ಸುಮಾರು ಎರಡೂವರೆ ತಿಂಗಳ ನಂತರ ದುಬಾರೆಯಲ್ಲಿ ಪುನಾರಂಭವಾಗಿರುವ ರಿವರ್ ರ‌್ಯಾಫ್ಟಿಂಗ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ವೈಟ್ ವಾಟರ್ ರ‌್ಯಾಫ್ಟಿಂಗ್ ಸಾಧ್ಯವಾಗುತ್ತಿಲ್ಲ. ೧.೫ ಕಿಮೀ ದೂರದ ಸ್ಟಿಲ್ ವಾಟರ್ ರ‌್ಯಾಫ್ಟಿಂಗ್ ಮಾಡಿಸುತ್ತಿದ್ದೇವೆ. ಮಳೆ ಹೆಚ್ಚಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿ ಆದರೆ ವೈಟ್ ವಾಟರ್ ರ‌್ಯಾಫ್ಟಿಂಗ್ ಕೂಡ ಶುರು ಮಾಡಲಾಗುವುದು. ರ‌್ಯಾಫ್ಟಿಂಗ್ ವೇಳೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಪ್ರವಾಸಿಗರು ಯಾವುದೇ ಆತಂಕ ಇಲ್ಲದೆ ಕ್ರೀಡೆಯ ಆನಂದ ಪಡೆದುಕೊಳ್ಳಬಹುದು. ಅನ್‌ಸೀಸನ್‌ನಲ್ಲಿ ಸಂಕಷ್ಟ ಎದುರಿಸುವ ರ‌್ಯಾಫ್ಟಿಂಗ್ ಕಾರ್ಮಿಕರ ನೆರವಿಗೆ ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ಬರುವಂತಾಗಬೇಕು.
ಸಿ.ಎಲ್. ವಿಶ್ವ, ಮಾಜಿ ಅಧ್ಯಕ್ಷ, ರಿವರ್ ರ‌್ಯಾಫ್ಟಿಂಗ್ ಅಸೋಸಿಯೇಷನ್, ಕೊಡಗು