ಜಿಲ್ಲೆ

ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮ ವಿಚಾರಿಸಬಹುದು: ಕಾವೇರಿ ಹೋರಾಟದಲ್ಲಿ ನಟ ವಿನೋದ್ ರಾಜ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸೋಮವಾರ ಕನ್ನಡದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್‌ರಾಜ್ ಭಾಗವಹಿಸಿದರು.

ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ವಿನೋದ್‌ರಾಜ್, ಕೃಷಿ ಮಾಡುತ್ತಲೇ ನೀರಿನ ಅಭಾವ ನನಗೆ ತಿಳಿಯಿತು. ಕಾವೇರಿ ನೀರಿನ ವಿಚಾರದಲ್ಲಿ ಪ್ರತಿ ಬಾರಿಯೂ ನಮಗೆ ಅನ್ಯಾಯ ಆಗಿದೆ. ಆದ್ದರಿಂದ ಸಂಕಷ್ಟ ಸೂತ್ರ ಅನಿವಾರ್ಯವಿದೆ. ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮ ವಿಚಾರಿಸಬಹುದು. ನಾವು ಕ್ಷಾಮವಾದಾಗ ಇನ್ನೊಬ್ಬರ ಕ್ಷೇಮ ಕೇಳಲು ಆಗಲ್ಲ. ಕಾನೂನಿಗಿಂತ ನಾವು ದೊಡ್ಡವರಲ್ಲ. ಸುಪ್ರೀಂ ಹಾಗೂ ಪ್ರಾಧಿಕಾರ ವಾಸ್ತವ ಸ್ಥಿತಿ ನೋಡಿ ಆದೇಶ ಮಾಡಬೇಕು. ನೀರಿಲ್ಲ ನೀರಿಲ್ಲ ಎಂದು ಹೋರಾಡುತ್ತಿದ್ದೇವೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ ಎಂದರು.

ಅರಣ್ಯ ಇಲಾಖೆಯಿಂದಲೂ ರೈತರಿಗೆ ಸಮಸ್ಯೆ ಇದೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು. ರೈತರ ಹೋರಾಟಕ್ಕೆ ಜಯ ಸಿಗಬೇಕು. ತಾಯಿ ಭುವನೇಶ್ವರಿಯಲ್ಲಿ ನೀರಿನ ಸಮಸ್ಯೆ ಬಾರದಂತೆ ಪ್ರಾರ್ಥಿಸುತ್ತೇನೆ. ನನಗೆ ಅವರ ಅಲ್ಪ ಸ್ವಲ್ಪ ಬುದ್ದಿ ಬರಲೆಂದು ನನ್ನ ತಾಯಿ ವಿಶ್ವೇಶ್ವರಯ್ಯ ಅವರನ್ನ ಪೂಜಿಸುತ್ತಿದ್ದರು. ಅದಕ್ಕೆ ನಾನು ಎಲ್ಲವನ್ನೂ ಬಿಟ್ಟು ರೈತನಾಗಿಬಿಟ್ಟೆ ಎನ್ನಿಸುತ್ತದೆ. ನಿರಂತರವಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಹೋರಾಟ ಯಾರ ಕಿವಿಗೂ ಮುಟ್ಟಲಿಲ್ವಾ? ಹೋರಾಟಕ್ಕೆ ಬೆಲೆ ಇಲ್ವಾ?. ಕಾವೇರಿಯ ವಿಷಯದಲ್ಲಿ ಕಾವು ಏರದ ಹಾಗೇ ತೀರ್ಪು ಕೊಡಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವಾಗಬಾರದು. ಅಭಿಮಾನಿಗಳು ನಮ್ಮ ಚಿತ್ರ ನೋಡಿ ಮೆಚ್ಚಿದ್ದಾರೆ. ನಮಗೆ ಅಭಿಮಾನಿಗಳು ಯಶಸ್ಸು ತಂದುಕೊಟ್ಟಿದ್ದಾರೆ ಎಂದರು.

ಲೀಲಾವತಿ ಮಾತನಾಡಿ, ಜನರ ಅಭಿಮಾನ ನನ್ನನ್ನ ಇಲ್ಲಿವರೆಗು ಕರೆದುಕೊಂಡುಬಂದಿದೆ. ಯಾವಾಗಲು ನಗುನಗುತ್ತಾ ಇರಬೇಕು. ಕಾವೇರಿ ಕಣ್ಣೀರು ಆಗಬಾರದು. ನೀರು ನೀರು ಎಂದು ಕಣ್ಣೀರು ಹಾಕಬಾರದು. ನೀರಿಗೆ ಎಂದೂ ಬರ ಬರಬಾರದು ಎಂದರು.