ಜಿಲ್ಲೆ

ತುರ್ತು ಅಧಿವೇಶನ ಕರೆಯಲು ಆಗ್ರಹ: ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಣಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯಕ್ಕೊಳಗಾಗುತ್ತಿರುವ ಕರ್ನಾಟಕದ ರೈತರಿಗೆ ನ್ಯಾಯ ದೊರಕಿಸಿಕೊಡಲು ವಿಧಾನ ಮಂಡಲದ ವಿಶೇಷ ತುರ್ತು ಅಧಿವೇಶನ ಕರೆಯುವಂತೆ ರಾಜ್ಯಸರ್ಕಾರವನ್ನು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಗ್ರಹಿಸಿದೆ.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಿರಂತರ ಧರಣಿ ನಡೆಸುತ್ತಿರುವ ಸಮಿತಿ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ಸಭೆ ನಡೆಸಿ ಹಲವು ನಿರ್ಣಯ ಕೈಗೊಂಡಿದೆ. ಅದರಂತೆ ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಿಸುತ್ತಿರುವ ಕರ್ನಾಟಕ ರಾಜ್ಯದ ರೈತರ ಪರ ಕರ್ನಾಟಕ ಸರ್ಕಾರ ನಿಲ್ಲಬೇಕಿದ್ದು, ಹಾಗಾಗಿ ತುರ್ತು ಅಧಿವೇಶನ ನಡೆಸಿ ಸಮಗ್ರ ಚರ್ಚೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದೆ.

ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿಯಾಗಿ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲು ಮುಂದಾಗಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಧಿಕ್ಕರಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾಸ್ತವಾಂಶದ ಅಂಕಿ-ಅಂಶಗಳ ಸಮೇತ ಸಮರ್ಥವಾದ ಮಂಡನೆಗೆ ಸರ್ಕಾರ ಮುಂದಾಗಬೇಕು, ಪ್ರಾಧಿಕಾರದ ಆದೇಶ ಪಾಲನೆ ಮಾಡಿ ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಸರ್ಕಾರ ಬಿಡುಗಡೆ ಮಾಡಬಾರದು. ರಾಜ್ಯದ ಸಂಸದರು ಪಕ್ಷಾತೀತವಾಗಿ ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾವೇರಿ ವಿಚಾರದಲ್ಲಿ ಸಂಕಷ್ಟದ ಸಮಯದಲ್ಲಿ ಸಂಕಷ್ಟ ಸೂತ್ರ ರಚಿಸಲು ಒತ್ತಾಯ ಮಾಡಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿ ಮಧ್ಯಪ್ರವೇಶಿಸಿ ಸಂಕಷ್ಟ ಸಮಯದಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಕಾಮಗಾರಿಯನ್ನು ಆರಂಭಿಸಿ ತ್ವರಿತವಾಗಿ ಮುಗಿಸಲು ಕಾರ್ಯೋನ್ಮುಖ ರಾಗಬೇಕು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಇರುವ ನೀರನ್ನು ಕುಡಿಯುವುದಕ್ಕಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತ ಹಿತರಕ್ಷಣಾ ಸಮಿಶಿ ನಿರ್ಣಯ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ರಸ್ತೆ ತಡೆ, ಕಪ್ಪುಪಟ್ಟಿ ಪ್ರದರ್ಶನ: ತ.ನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸಮಿತಿ ನೇತೃತ್ವದಲ್ಲಿ ಜೆಡಿಎಸ್ ಮಾಜಿ ಶಾಸಕರು, ರೈತರು, ಪ್ರಗತಿಪರ ಮತ್ತು ಕನ್ನಡ ಪರ ಸಂಘಟನೆ ಹೋರಾಟಗಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಅಂತೆಯೇ ಕೊರಳಿಗೆ ಕಪ್ಪು ಪಟ್ಟಿ ಸುತ್ತಿಕೊಂಡು ಕಪ್ಪು ಬಾವುಟ ಪ್ರದರ್ಶಿಸುತ್ತಾ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.