ಜಿಲ್ಲೆ

ಕಾವೇರಿ ನೀರಿನ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದ ರಾಜ್ಯಸರ್ಕಾರ: ಮಂಡ್ಯದಲ್ಲಿ ಬೀದಿಗಿಳಿದು ಪ್ರತಿಭಟನೆ

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದೆನ್ನುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು ಧರಣಿ ನಿರತರಾಗಿದ್ದ ರೈತರು, ಕನ್ನಡ, ಪ್ರಗತಿಪರ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಸಂಬಂಧಿಸಿದಂತೆ ಬುಧವಾರ ಆಯೋಜಿಸಿದ್ದ ಸರ್ವ ಪಕ್ಷದ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂಬ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಧಿಕಾರ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಸೂಚಿಸಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಹೋರಾಟಗಾರರಿಗೆ ಮಾತು ಕೊಟ್ಟಿತ್ತು. ಆದರೆ ಸರ್ವ ಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ದೃಢ ನಿರ್ಧಾರ ಮಾಡುವ ಬದಲು ಕಾನೂನು ತಜ್ಞರ ಜತೆ ಮಾತುಕತೆ ನಡೆಸಿ ನೀರು ಬಿಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿರುವುದು ಕಾವೇರಿ ಕಣಿವೆ ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಇಂತಹ ನಿಲುವು ಗೊಂದಲಕಾರಿಯಾಗಿದ್ದು, ಸ್ಪಷ್ಟ ನಿರ್ಧಾರ ಮಾಡದೆ ಇರುವುದು ಅನುಮಾನ ಮೂಡಿಸಿದೆ. ಮಾತ್ರವಲ್ಲದೆ ನೆರೆ ರಾಜ್ಯಕ್ಕೆ ನೀರು ಬಿಡುವ ಹುನ್ನಾರ ಮಾಡಲಾಗಿದೆ. ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 97 ಅಡಿಗೆ ಕುಸಿದಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಕುಡಿಯಲು ಸಹ ನೀರು ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ತ.ನಾಡಿಗೆ ನೀರು ಬಿಟ್ಟರೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಲಿದೆ. ಸೆ.21ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ವೇಳೆ ಕಾವೇರಿಕೊಳ್ಳದ ಪ್ರದೇಶದಲ್ಲಿರುವ ಜಲಾಶಯಗಳ ವಾಸ್ತವ ಪರಿಸ್ಥಿತಿ ಕುರಿತು ಸಮರ್ಥ ವಾದ ಮಾಡುವ ಮೂಲಕ ರೈತರ ಕಾಪಾಡಲು ಮುಂದಾಗ ಬೇಕಾಗಿದೆ ಎಂದು ಹೇಳಿದರು.

ಸಂಸದರು ಮತ್ತು ಶಾಸಕರು ಕಾವೇರಿ ವಿಚಾರದಲ್ಲಿ ರೈತಪರ ಹೋರಾಟಕ್ಕೆ ಇಳಿಯಬೇಕು. ರಾಜ್ಯ ಸರ್ಕಾರ ನೀರು ಬಿಡದಂತೆ ಒತ್ತಡ ಹಾಕಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಂಕಷ್ಟ ಕಾಲದಲ್ಲಿ ರಾಜ್ಯದ ರೈತರ ಕಾಪಾಡಲು ಮುಂದಾಗಬೇಕು. ಕುಡಿಯುವ ನೀರಿಗೆ ಕಾವೇರಿ ಕೊಳ್ಳದ ಜಲಾಶಯಗಳನ್ನು ಅವಲಂಬಿಸಿರುವ ಬೆಂಗಳೂರು ಮತ್ತು ಮೈಸೂರಿನ ಜನರು ಹೋರಾಟ ಬೆಂಬಲಿಸಿ ಪ್ರತಿಭಟನೆಗೆ ಮುಂದಾಗಬೇಕು. ಇಲ್ಲದಿದ್ದರೆ ಕುಡಿಯುವ ನೀರು ಅಭಾವ ಸೃಷ್ಟಿಯಾಗುವುದರ ಜತೆಗೆ ಮುಂದಿನ ಪೀಳಿಗೆಗೆ ಕಾವೇರಿ ನದಿ ವಿಚಾರದಲ್ಲಿ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಇನ್ನು ರಾಜ್ಯ ಸರ್ಕಾರದ ಗೊಂದಲಕಾರಿ ನಿಲುವಿನಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ನೀರು ಬಿಡುವುದಿಲ್ಲ ಎಂದು ತೀರ್ಮಾನಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೀಲಾರ ಕೃಷ್ಣ, ಸಿದ್ದರಾಮೇಗೌಡ, ಕನ್ನಡಸೇನೆ ಮಂಜುನಾಥ್, ಎಂ.ವಿ.ಕೃಷ್ಣ ಇತರರಿದ್ದರು.