ಜಿಲ್ಲೆ

ತ.ನಾಡಿಗೆ ನೀರು ಬಿಟ್ಟ ಆರೋಪ: ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಖಾಕಿ ವಶಕ್ಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲಾಯಿತು.

ಸುಭಾಷ್‌ನಗರದಲ್ಲಿರುವ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ ಸೇರಿದಂತೆ ಹಲವರನ್ನು ವಿನೋಬಾ ರಸ್ತೆಗೆ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿ ನೆರೆ ರಾಜ್ಯಕ್ಕೆ ಹರಿಸುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ. ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದ ಸರ್ಕಾರ ಬೆಳೆದು ನಿಂತಿರುವ ಬೆಳೆಗೆ ನೀರು ನೀಡದೆ, ಜನ ಜಾನುವಾರುಗಳಿಗೂ ಕುಡಿಯುವ ನೀರು ಇಲ್ಲದಂತೆ ಮಾಡಿದೆ. ಕಾವೇರಿ ನದಿಗೆ 4000 ಕ್ಯೂಸೆಕ್ ನೀರು ಬಿಡಲಾಗಿದ್ದು, ಬೆಂಗಳೂರಿಗೆ ಎಂದು ಸುಳ್ಳು ಹೇಳುತ್ತಿದೆ. ಅಷ್ಟೊಂದು ಪ್ರಮಾಣದ ನೀರನ್ನು ವಾಮಮಾರ್ಗದಲ್ಲಿ ತ.ನಾಡಿಗೆ ಹರಿಸುತ್ತಿದೆ. ಬರಗಾಲದ ಸಂಕಷ್ಟದಲ್ಲಿ ರೈತರ ನೆರವಿಗೂ ಬಾರದೆ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡುತ್ತಿದೆ. ಇದ್ದ ನೀರನ್ನೆಲ್ಲ ನೆರೆ ರಾಜ್ಯಕ್ಕೆ ಹರಿಸಿ ರೈತರ ಬದುಕನ್ನು ಸರ್ವನಾಶ ಮಾಡಿ ಇದೀಗ ಕುಡಿಯಲು ಸಹ ನೀರು ಇಲ್ಲದಂತೆ ಮಾಡುತ್ತಿದೆ ಎಂದು ಕಿಡಿಕಾರಿದರು.