ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಪ್ರತಿ ಸೋಮವಾರದ ಹೋರಾಟ ಐದನೇ ವಾರವೂ ಮುಂದುವರೆಯಿತು.
ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆ ರಕ್ಷಣೆ ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಬೂಬು ಹೇಳುವುದು ಬೇಡ. ತಮಿಳುನಾಡಿಗೆ ನೀರು ಹರಿಸಬೇಡಿ ಇಲ್ಲಿನ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ಸಹ ರೈತರ ಹೋರಾಟ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟ ಪರಿಣಾಮ ಕೆಆರ್‌ಎಸ್‌ನಲ್ಲಿ ನೀರು ಇಲ್ಲದೆ ಸಂಕಷ್ಟ ಪಡುವಂತಾಗಿದೆ. ಇದರಿಂದಾಗಿ ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿವೆ, ಕೆರೆ ಕಟ್ಟೆಗಳು ನೀರಿಲ್ಲದೆ ಸೊರಗಿವೆ, ಜನ ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಹೊಸ ಮೈಷುಗರ್ ಕಾರ್ಖಾನೆ ನಿರ್ಮಾಣವೆಂದು ಘೋಷಣೆ ಮಾಡಲಾಗಿದೆ. ಆದರೆ ಶಾಸಕರು 500 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ, ಅನುದಾನ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಹೊಸ ಕಾರ್ಖಾನೆ ಯಾವ ಸ್ಥಳದಲ್ಲಿ ನಿರ್ಮಾಣ ಆಗಬೇಕೆಂಬುದರ ಬಗ್ಗೆ ಗೊಂದಲ ಇದೆ. ಕಾರ್ಖಾನೆಯಲ್ಲಿ 14 ಸಾವಿರ ರೈತರು ಷೇರು ಹೊಂದಿದ್ದಾರೆ. ಕಬ್ಬು ಬೆಳೆಗಾರರು ಮತ್ತು ರೈತರೊಂದಿಗೆ ಚರ್ಚೆ ಮಾಡಿಲ್ಲ. ಮೈಷುಗರ್ ಕಾರ್ಖಾನೆಯ ಮಿಲ್ ಪ್ರತಿನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಕಾರ್ಖಾನೆ ನಿಂತು ಮೂರು ತಿಂಗಳಾಗಿದೆ. ಜೂನ್ ವೇಳೆಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಬೇಕು. ಇದರ ಬಗ್ಗೆ ಚಿಂತಿಸದೆ ಹೊಸ ಕಾರ್ಖಾನೆ ಅವಶ್ಯಕತೆ ಇಲ್ಲದಿದ್ದರೂ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮುದ್ದೇಗೌಡ, ಕನ್ನಡಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ಕೆಂಪೇಗೌಡ, ನಾರಾಯಣಸ್ವಾಮಿ, ಶಿವಲಿಂಗಯ್ಯ, ಎಂ.ಎಲ್.ತುಳಸಿಧರ್, ಇಂಡುವಾಳು ಬಸವರಾಜು ಇತರರಿದ್ದರು.