ಮಂಡ್ಯ: ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸೋಮವಾರ 24ನೇ ದಿನ ಹಾಗೂ ಅನಿರ್ದಿಷ್ಟಾವಧಿ ಧರಣಿ 105ನೇ ದಿನ ಪೂರೈಸಿತು.
ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಉಪವಾಸದಲ್ಲಿ ಗಾಣದಾಳು ಚಂದ್ರಲಿಂಗು, ಗುನ್ನಾಯಕನಹಳ್ಳಿ ಜಯರಾಮು, ಸೊಳ್ಳೆಪುರ ಸೊ.ಶಿ.ಪ್ರಕಾಶ್, ಕುದರಗುಂಡಿ ಸಿ.ನಾಗರಾಜ್, ಕೋಣಸಾಲೆ ಕೆ.ಲಿಂಗಯ್ಯ, ದೇಶಹಳ್ಳಿ ವೆಂಕಟೇಶ್ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು. ಕಾವೇರಿ ನೀರಿಗಾಗಿ ನಿರಂತರ ಪ್ರತಿಭಟನೆ ಮಾಡಿದರೂ ಸಹ ರಾಜ್ಯ ಸರ್ಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಮುಂದಾದ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಯಿತು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಎಸ್.ನಾರಾಯಣ್ ಇತರರಿದ್ದರು.