ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 94 ಹಾಗೂ ಉಪವಾಸ ಸತ್ಯಾಗ್ರಹ 13ನೇ ದಿನ ಪೂರೈಸಿದೆ.
ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ವರ್ಷದ ಪರಿನಿಬ್ಬಾಣ ದಿನ ಆಚರಿಸಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಗುನ್ನಾಯಕನಹಳ್ಳಿ ಜಯರಾಂ, ಸೀನಪ್ಪನದೊಡ್ಡಿ ಮಲ್ಲೇಶ್, ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ, ಅರುವನಹಳ್ಳಿ ಸತ್ಯಭಾಮ, ಆಬಲವಾಡಿ ಸೌಭಾಗ್ಯಮ್ಮ, ಮಂಡ್ಯ ನಗರದ ಸಬಿನ್‌ತಾಜ್, ತಾಯಮ್ಮ ಉಪವಾಸ ಸತ್ಯಾಗ್ರಹ ನಡೆಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಬೆಳಗಾವಿಯಲ್ಲಿ ವಿಧಾನಸಭೆ ಹಾಗೂ ಪರಿಷತ್ ಕಾರ್ಯ ಕಲಾಪ ಆರಂಭಗೊಂಡು ಎರಡು ದಿನ ಕಳೆದರೂ ವಿಪಕ್ಷ ನಾಯಕ ಅಥವಾ ಶಾಸಕರು ಕಾವೇರಿ ವಿಚಾರದ ಕುರಿತು ದನಿ ಎತ್ತದಿರುವುದು ಅತ್ಯಂತ ನೋವಿನ ಸಂಗತಿ. ಇವರಿಗೆ ಸಭೆಯ ಮೌಲ್ಯದ ಅರಿವು ಇಲ್ಲವೇ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನಾಡು ಕಂಡ ಅನೇಕ ಮಹನೀಯರು ವಿಧಾನಮಂಡಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹೋಗಿದ್ದಾರೆ. ಅವರು ತಮ್ಮ ನಡೆ ನುಡಿಯ ಮೂಲಕ ಇಂದಿಗೂ ಮಾದರಿಯಾಗಿದ್ದಾರೆ. ಹಾಗಾಗಿ ಇಂದಿನ ಜನಪ್ರತಿನಿಧಿಗಳು ಎರಡು ಸದನದ ಮೌಲ್ಯ ಅರಿತು ನಾಡಿನ ಜ್ವಲಂತ ಸಮಸ್ಯೆಯಾಗಿರುವ ಕಾವೇರಿ ವಿವಾದದ ಕುರಿತು ಸರ್ಕಾರದ ಗಮನ ಸೆಳೆದು ಚರ್ಚಿಸದೆ ಕಾಲಹರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಈ ಜಗತ್ತಿಗೆ ಶ್ರೇಷ್ಟವಾದ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ. ಅವರು ಬಿಸಿಲು ಮಳೆಯನ್ನದೆ ಹೊರಗೆ ನಿಂತು ಪ್ರಭುತ್ವದ ಆಡಳಿತವನ್ನು ನೋಡಿ ಗೇಲಿ ಮಾಡುತ್ತಿರುವಂತಿದೆ. ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಹೇಗೆ ಕಿತ್ತಾಡುತ್ತಿದ್ದಾರೆ ಹಾಗೂ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಿರುವಂತೆ ನನಗೆ ಭಾಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿಯಲ್ಲಿ ಇಂಡುವಾಳು ಚಂದ್ರಶೇಖರ್, ಕನ್ನಡಸೇನೆ ಮಂಜುನಾಥ್, ಎಸ್.ನಾರಾಯಣ, ಹುರುಗಲವಾಡಿ ರಾಮಯ್ಯ, ಮಂಜುಳಾ ಇತರರಿದ್ದರು.