ಜಿಲ್ಲೆ

ರೈತರ ಕೈಗಳಿಗೆ ತೆಂಗಿನ ಚಿಪ್ಪು ಕೊಟ್ಟ ರಾಜ್ಯಸರ್ಕಾರ: ಮಂಡ್ಯದಲ್ಲಿ ವಿಭಿನ್ನ ಹೋರಾಟ

ಕೆ.ಎನ್.ರಾಘವೇಂದ್ರ

ಮಂಡ್ಯ: ತ.ನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ವಿನೂತನವಾಗಿ ತೆಂಗಿನ ಚಿಪ್ಪು ಪ್ರತಿಭಟನೆ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಎದುರು ಶನಿವಾರ ಪ್ರತಿಭಟನಾಕಾರರು, ತೆಂಗಿನಚಿಪ್ಪು ಹಿಡಿದು, ಕಿವಿಗೆ ಹೂವು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಅಂತೆಯೇ ರಾಜ್ಯ ಸರ್ಕಾರ ರೈತರ ಕಿವಿ ಹೂವು ಇಟ್ಟಿದೆ, ಕೈ ಚಿಪ್ಪು ಕೊಟ್ಟಿದೆ. ಈ ಮೂಲಕ ರೈತರ ಬದುಕನ್ನ ಬೀದಿಗೆ ರಾಜ್ಯ ಸರ್ಕಾರ ತಂದಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕಣಿವೆ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಶನಿವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಕಾವೇರಿ ಹೋರಾಟವನ್ನು ಪ್ರತಿ ತಾಲೂಕಿಗೂ ವಿಸ್ತರಿಸಲು ತೀರ್ಮಾನಿಸಿದೆ.

ಸರ್‌ಎಂವಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಹೋರಾಟದ ಸ್ಥಳದಲ್ಲಿ ಸಭೆ ನಡೆಸಿ ಹಲವು ನಿರ್ಣಯ ಕೈಗೊಂಡ ಸಮಿತಿ ಸದಸ್ಯರು, ಪ್ರಾಧಿಕಾರದ ಆದೇಶ ಹೊರಬಿದ್ದರೂ ರಾಜ್ಯ ಸರ್ಕಾರ ಇದುವರೆಗೂ ನೀರು ಬಿಡುಗಡೆ ಮಾಡುವುದಿಲ್ಲ ಎಂದು ನಿರ್ಧಾರ ಮಾಡದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅ.1ರಿಂದಲೇ ಹೋರಾಟ ಆರಂಭಿಸಲು ತೀರ್ಮಾನಿಸಿತು. ಅದರಂತೆ ಸಮಿತಿಯ ತಾಲೂಕು ಘಟಕಗಳು ಸಕ್ರಿಯವಾಗಿ ನಿರಂತರ ಪ್ರತಿಭಟನೆ ಮುಂದುವರೆಸುವಂತೆ ಮನವಿ ಮಾಡಿದೆ.