ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ತ.ನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ನಗರದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಚಡ್ಡಿ ಮೆರವಣಿಗೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಪಟಾಪಟಿ ಚಡ್ಡಿ ಧರಿಸಿ ಹಾಗೂ ಖಾಲಿ ಬಿಂದಿಗೆ ಪ್ರದರ್ಶಿಸಿದರು. ಅಂತೆಯೇ ಬೆಂ-ಮೈ ಹೆದ್ದಾರಿ ಮೂಲಕ ಮೆರವಣಿಗೆ ಹೊರಟು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಹೋರಾಟ ಬೆಂಬಲಿಸಿದರು.
ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಕಾವೇರಿಕೊಳ್ಳದ ಜಲಾಶಯಗಳಿಂದ ತ.ನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಈಗಾಗಲೇ ನೆರೆ ರಾಜ್ಯಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ ಸಂಗ್ರಹವಾಗಿದ್ದ ನೀರು ಹರಿದು ಹೋಗಿದ್ದು, ಇದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಮಂಡ್ಯ ಜಿಲ್ಲೆಗೆ 100 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇದರೊಂದಿಗೆ ತ.ನಾಡಿಗೆ ನೀರು ಹರಿಸಿ ರೈತರ ಬೆಳೆಗೆ ನೀರಿಲ್ಲದಂತೆ ಮಾಡಿರುವ ರಾಜ್ಯಸರ್ಕಾರ ಅನ್ನದಾತರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಸಂಘಟನೆಯ ಮಂಜುನಾಥ್, ನಂದೀಶ್, ಗುತ್ತಲು ಚಂದ್ರು, ಮಹಾಂತಪ್ಪ, ಜಯಮ್ಮ, ದರ್ಶನ್, ರಾಜೇಶ್ ಇತರರಿದ್ದರು.