ಜಿಲ್ಲೆ

ಸಂಕಷ್ಟ ಸೂತ್ರ ರೂಪಿಸಲು ಒತ್ತಾಯ: ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾವೇರಿ ನದಿ ನೀರಿನ ವಿವಾದವನ್ನು ಶಾಶ್ವತ ಬಗೆಹರಿಸುವ ನಿಟ್ಟಿನಲ್ಲಿ ಸಂಕಷ್ಟ ಸೂತ್ರ ಹಾಗೂ ರಾಷ್ಟ್ರೀಯ ಜಲನೀತಿ ರೂಪಿಸಬೇಕು ಎಂದು ಒತ್ತಾಯಿಸಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬ್ರಿಟಿಷರ ಕಾಲದಿಂದಲೂ ಕಾವೇರಿ ನೀರಿನ ಸಮಸ್ಯೆ ಜೀವಂತವಾಗಿದೆ. ಕಾವೇರಿ ನ್ಯಾಯ ಮಂಡಳಿಯ ಹೈತೀರ್ಪು ಬಂದಿದ್ದು, ಆದೇಶದ ಅನುಗುಣವಾಗಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರಗಳನ್ನು ರಚಿಸಲಾಯಿತು. ಆದರೆ ಸಂಕಷ್ಟ ಸಮಯದಲ್ಲಿ ಇವುಗಳು ನ್ಯಾಯೋಚಿತ ಆದೇಶಗಳನ್ನು ನೀಡದೆ ಒಂದು ರಾಜ್ಯದ ಪರವಾಗಿ ನಿರ್ಧಾರ ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ಅವೈಜ್ಞಾನಿಕ ಆದೇಶಗಳಿಂದಾಗಿ ಕರ್ನಾಟಕದಲ್ಲಿ ರೈತರ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಮಾತ್ರವಲ್ಲದೆ ಕಾವೇರಿ ನೀರನ್ನು ಅವಲಂಬಿಸಿರುವ 8 ಜಿಲ್ಲೆ, ಮಹಾನಗರ ಪಟ್ಟಣಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಎದುರಾಗಿದೆ. ಈ ಸಂಕಷ್ಟ ದಿನದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆ ಇದ್ದರೂ ನ್ಯಾಯಾಲಯ ಮತ್ತು ಪ್ರಾಧಿಕಾರ ಮೊದಲು 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಅದನ್ನು ಪಾಲನೆ ಮಾಡಿ ನೀರು ಹರಿಸಿದೆ. ಆದರೂ ಮತ್ತೆ ಮತ್ತೆ 5 ಸಾವಿರ, 3 ಸಾವಿರ, 2600 ಕ್ಯೂಸೆಕ್ ನೀರು ಹರಿಸುವಂತೆ ಪದೇ ಪದೇ ಅವೈಜ್ಞಾನಿಕ ತೀರ್ಪು ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ನಾರಾಯಣಸ್ವಾಮಿ, ಹಾಡ್ಯ ರಮೇಶರಾಜು, ಪುಟ್ಟಮ್ಮ, ಅಪ್ಪಾಜಿಗೌಡ, ದಲಿತ ಸಂಘರ್ಷ ಸಮಿತಿಯ ಅಂದಾನಿ ಸೋಮನಹಳ್ಳಿ, ಕರ್ನಾಟಕ ಕಾವಲು ಪಡೆಯ ಮೋಹನ್‌ಕುಮಾರ್ ಗೌಡ, ಕಾವೇರಿ ಕ್ರಿಯಾ ಸಮಿತಿಯ ಜಯಪ್ರಕಾಶ್, ಕನ್ನಡ ಮಹಿಳಾ ಒಕ್ಕೂಟದ ಭಾಗ್ಯಮ್ಮ, ನಾನು ಕನ್ನಡಿಗ ಒಕ್ಕೂಟದ ಹರಿಪ್ರಸಾದ್, ರವಿಶಂಕರ್, ಗೌರಮ್ಮ, ಉಮ್ಮಡಹಳ್ಳಿ ಉಮೇಶ್, ಎಂ.ಶಿವಕುಮಾರ್, ಬೆಂಜಮಿನ್ ಥಾಮಸ್, ನಾಗೇಶ್ ಉಮ್ಮಡಹಳ್ಳಿ ಇತರರಿದ್ದರು.