ಜಿಲ್ಲೆ

ಮೇಕೆದಾಟು ನಿರ್ಮಾಣಕ್ಕೆ ಕಾನೂನು ಹೋರಾಟ ಮಾಡಲು ಕಾವೇರಿ ಕ್ರಿಯಾ ಸಮಿತಿ ಒತ್ತಾಯ

ಮೈಸೂರು: ಆಗಾಗ್ಗೆ ತಲೆದೋರುತ್ತಿರುವ ನೀರಿನ ಸಮಸ್ಯೆ ಬಗೆಹರಿಸಲು ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಕಾವೇರಿ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಕಾವೇರಿ ಕ್ರಿಯಾ ಸಮಿತಿಯಿಂದ ನಗರದ ದೊಡ್ಡಗಡಿಯಾದ ಬಳಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ, ಕಾವೇರಿ ಪ್ರಾಧಿಕಾರವನ್ನು ರದ್ದುಗೊಳಿಸಬೇಕು. ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಹಲವು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಹಾಗೂ ಕಾವೇರಿ ನೀರಿನ ಸಮಸ್ಯೆ ನಿವಾರಣೆಗಾಗಿ ಮೇಕೆದಾಟು ಯೋಜನೆಗೆ ಅನುಮತಿ ದೊರಕಿಸಿಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು. ಆದರೆ, ಅವರೇ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದ್ದರೂ ಮೇಕೆದಾಟು ಯೋಜನೆಗೆ ಅನುಮತಿ ದೊರಕಿಸಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಐಎನ್‌ಡಿಎ ಮೈತ್ರಿಕೂಟದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಕಾರಣ, ರಾಜ್ಯ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿ ಮರೆತುಬಿಟ್ಟಿದೆ. ಯಾವುದೇ ಅನುಮತಿ ಪಡೆಯದೆ ತಮಿಳುನಾಡು, ಕಾವೇರಿ ನದಿ ವ್ಯಾಪ್ತಿಯಲ್ಲಿ ನೀರು ಪೂರೈಕೆ ಹಾಗೂ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ನಡೆಸುತ್ತಿದ್ದರೂ, ಅದನ್ನು ನಿಲ್ಲಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ತಮಿಳುನಾಡು ತಡೆಯೊಡ್ಡುತ್ತಿದೆ ಎಂದರು.
ಕಾವೇರಿ ಕ್ರಿಯಾ ಸಮಿತಿಯ ಸಂಚಾಲಕರಾದ ಮೂಗೂರು ನಂಜುಂಡಸ್ವಾಮಿ, ಮುಖಂಡರಾದ ಮೆಲ್ಲಹಳ್ಳಿ ಮಹದೇವಸ್ವಾಮಿ, ಎಂ.ಜೆ. ಸುರೇಶ್‌ಗೌಡ, ಪ್ರಭಾಕರ್, ಅಶೋಕ್, ಮಂಜುಳಾ, ವನಿತಾ, ಹನುಮಂತೇಗೌಡ, ನೇಹಾ, ಜಿ.ನಾಗರಾಜು, ವರಕೋಡು ಕೃಷ್ಣಗೌಡ, ಶಿವಕುಮಾರ್, ವೆಂಕಟಮ್ಮ, ಪುಷ್ಪಾವತಿ, ಭಾಗ್ಯಮ್ಮ, ಸಿಂಧುವಳ್ಳಿ ಶಿವಕುಮಾರ್, ಸೋಮಶೇಖರ್, ನಂದೀಶ್, ವಿಷ್ಣು, ಕುಮಾರ್ ಇತರರು ಇದ್ದರು.