ಜಿಲ್ಲೆ

ಜಿಲ್ಲೆಯ ಕಟ್ಟಕಡೆಯ ಗ್ರಾಮಕ್ಕೂ ನೀರು: ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಹಲಗೂರು: ಕೆಆರ್‌ಎಸ್ ಜಲಾಶಯದಿಂದ ಜಿಲ್ಲೆಯ ಕಟ್ಟೆಕಡೆಯ ಗ್ರಾಮಕ್ಕೂ ನೀರು ಹರಿಸುವ ನಿಟ್ಟಿನಲ್ಲಿ ನಾಲೆ ಆಧುನೀಕರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಸಮೀಪದ ಟಿ.ಕೆ.ಹಳ್ಳಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಆಯೋಜಿಸಿದ್ದ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತಿದೆ. ಅದೇ ರೀತಿ ಈಗಾಗಲೇ ಜಿಲ್ಲೆಯ ಕೆರೆ, ಕಟ್ಟೆಗಳನ್ನು ತುಂಬಿಸಲಾಗಿದೆ. ಮುಂದಿನ ದಿನದಲ್ಲಿ ನಾಲೆ ಆಧುನೀಕರಣಗೊಳಿಸಿ ಕಡೇ ಗ್ರಾಮದವರೆಗೂ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಇದಲ್ಲದೆ ಮುಂದಿನ ದಿನದಲ್ಲಿ ಮೇಕೆದಾಟು ಯೋಜನೆಗೂ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಮಳವಳ್ಳಿ, ರಾಮನಗರ ಭಾಗದ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಇದರಿಂದ 85 ಟಿ.ಎಂ.ಸಿ ನೀರು ನಮಗೆ ಸಿಗಲಿದೆ. ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಕಾವೇರಿ ಆರತಿ ಯೋಜನೆಗೆ ರೂಪುರೇಷೆ ಸಿದ್ಧವಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ನಿಯೋಗ ವರದಿ ಸಲ್ಲಿಸಲಿದೆ. ನಾಡಿನ ಸೇವೆ ಮಾಡುವ ದಿಟ್ಟ ಸಂಕಲ್ಪ ಮಾಡಿದ್ದೇವೆ. ಆದ್ದರಿಂದ ವಿಪಕ್ಷಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ ಅವರು, ಮಳವಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಟಿ.ಕೆ ಹಳ್ಳಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಬೆಂಗಳೂರು ಜಲಮಂಡಳಿಯಿಂದ ಐದು ಕೋಟಿ ರೂ ಅನುದಾನ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕವನ್ನ ಆರ್ಥಿಕ, ಸಾಮಾಜಿಕವಾಗಿ ಸದೃಢ ಮಾಡುತ್ತಿರುವುದನ್ನು ಸಹಿಸಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ. ಆದ್ದರಿಂದ ಎಲ್ಲ ವಿಷಯದಲ್ಲಿಯೂ ನಮಗೆ ಅನ್ಯಾಯ ಮಾಡುತ್ತಿದೆ. ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ಮುಂದಿದೆ. ನಾವು ಉತ್ತಮ ಆಡಳಿತ ಮಾಡ್ತಿದ್ದೇವೆ. ಜಿಎಸ್‌ಟಿ ಸಂಗ್ರಹದಲ್ಲಿ ನಮ್ಮದು ಎರಡನೇ ಸ್ಥಾನ ಇದೆ. ಆದರೆ ನಮಗೆ 60 ಸಾವಿರ ಕೋಟಿ ರೂ ಮಾತ್ರ ವಾಪಸ್ ಬರುತ್ತಿದೆ. ಅಂದರೆ ಪ್ರತಿ 100 ಪೈಸೆಯಲ್ಲಿ 15 ಪೈಸೆ ಮಾತ್ರ ಕೊಡಲಾಗುತ್ತಿದೆ. ಪಾಲು ಕೇಳಿದರೆ ನಮ್ಮ ವಿರುದ್ಧ ಆಕ್ರೋಶ ಹೊರಹಾಕುತ್ತಾರೆ. ಇದರ ವಿರುದ್ಧವಾಗಿ ನಮ್ಮ ಹೋರಾಟ ಎಂದರು.

ನಾವು ಹೇಳಿದ್ದನ್ನು ಮಾಡುತ್ತೇವೆ. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಇದಕ್ಕೆಂದು 52 ಸಾವಿರ ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಈ ಗ್ಯಾರಂಟಿಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಟೀಕೆ ಮಾಡಿದ್ದರು. ಆದರೆ ನಾವು ಬಜೆಟ್‌ನಲ್ಲೂ ಗ್ಯಾರಂಟಿಗಳಿಗೆ ಅನುದಾನ ಮೀಸಲು ಇಟ್ಟಿದ್ದೇವೆ. ಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತು ಹೋಗಿವೆ ಎನ್ನುತ್ತಾರೆ. ಹಾಗಿದ್ದರೆ ಇದು ಅಭಿವೃದ್ಧಿ ಕೆಲಸ ಅಲ್ವಾ?. ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ. ಬೆಂಗಳೂರು ಜಲಮಂಡಳಿಯಿಂದ ಮಳವಳ್ಳಿಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಕೆ.ಜೆ.ಜಾರ್ಜ್, ಮದ್ದೂರು ಶಾಸಕ ಕೆ.ಎಂ.ಉದಯ್, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಂ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಟಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಟಿ.ತೇಜಕುಮಾರ್ ಇತರರಿದ್ದರು.