ಜಿಲ್ಲೆ

ಚರ್ಮಗಂಟು ರೋಗ ಇರಲಿ ಎಚ್ಚರ

Mysuru
  • ಮೈಸೂರು ಜಿಲ್ಲೆಯ ಗೋಪಾಲಕರಲ್ಲಿ ಆತಂಕ
  • ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಚಿಕಿತ್ಸೆ

ಸದೇಶ್ ಕಾರ್ಮಾಡ್ ಮೈಸೂರು
ಜಾನುವಾರುಗಳಿಗೆ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ಜಿಲ್ಲೆಯ ಪಶುಪಾಲಕರನ್ನು ಕಂಗೆಡಿಸಿದ್ದು, ಸಕಾಲಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಚಿಕಿತ್ಸೆ ಹಾಗೂ ಲಸಿಕೆ ಪ್ರಾರಂಭಿಸಿದ ಪರಿಣಾಮ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹತೋಟಿಯಲ್ಲಿದೆ.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. 2020ರಲ್ಲಿ ಸಣ್ಣ ಪ್ರಮಾ ಣದಲ್ಲಿ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿತ್ತು. ಈ ಬಾರಿ ಜಿಲ್ಲೆಯಲ್ಲಿ 140 ಜಾನುವಾರುಗಳಿಗೆ ಕಾಣಿಸಿಕೊಂಡಿದೆ. ಈ ಪೈಕಿ 1 ಜಾನುವಾರು ಮೃತಪಟ್ಟಿದ್ದು, ಉಳಿದ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಒಟ್ಟು 97 ಜಾನುವಾರುಗಳು ಸಂಪೂರ್ಣ ಗುಣಮು ಖವಾಗಿವೆ. ಜಿಲ್ಲೆಯ ಕೆ.ಆರ್. ನಗರ, ತಿ.ನರಸೀಪುರ ಹಾಗೂ ಮೈಸೂರು ತಾಲೂಕಿನ ಇಲವಾಲ, ಗೋಪಾಲಪುರ, ಜಯಪುರ ಭಾಗದಲ್ಲಿ ಹೆಚ್ಚಾಗಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.

ಮೈಸೂರಿನಲ್ಲಿ ಎಚ್ಚರ ಅಗತ್ಯ:
ಇದುವರೆಗೆ ನಗರದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿಲ್ಲ. ಹಾಗಂತ ನಿರ್ಲಕ್ಷೃ ಮಾಡುವುದು ಸರಿಯಲ್ಲ. ಮೈಸೂರು ತಾಲೂಕಿನಲ್ಲಿ ಈಗಾಗಲೇ ಈ ರೋಗ ಕಾಣಿಸಿಕೊಂಡಿದೆ. ಆದರೆ, ರೋಗದ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂ ರುವ ಗೋಪಾಲಪುರ, ಜಯಪುರ ಹಾಗೂ ಇಲವಾಲ ಗ್ರಾಮಗಳು ಮೈಸೂರು ನಗರಕ್ಕೆ ಹತ್ತಿರವಾದ ಗ್ರಾಮಗಳಾಗಿವೆ. ಹಾಗಾಗಿ ರೈತರು ಜಾನುವಾರುಗಳನ್ನು ಮೇಯಲು ಬಿಡುವ ಸಂದರ್ಭ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಈ ಕುರಿತು ಈಗಾಗಲೇ ಪಶುಪಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಾಡುತ್ತಿದೆ.

ಹಾಲಿನ ಮೂಲಕ ರೋಗ ಬರುವುದಿಲ್ಲ:
ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಸುವಿನ ಹಾಲು ಕುಡಿದರೆ ಮನುಷ್ಯರಿಗೆ ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ. ಈ ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ಹಾಲನ್ನು ಕುದಿಸಿ ನಂತರ ಬಳಕೆ ಮಾಡಬೇಕು ಎಂಬುದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಬಿ.ಎನ್. ಷಡಕ್ಷರಮೂರ್ತಿ ಅವರ ಸಲಹೆ.

  • ರೋಗದ ಲಕ್ಷಣ ಮತ್ತು ಪರಿಣಾಮಗಳು
  • ಜ್ವರ (104 ಎಫ್) ಕಾಣಿಸಿಕೊಳ್ಳುವುದು, ಆಹಾರ ನಿರಾಕರಣೆ, ಹಾಲಿನ ಇಳುವರಿ ಕುಸಿತ
  • ಮೈಮೇಲೆ 2 ರಿಂದ 5 ಸೆಂ.ಮೀ. ಗಾತ್ರದ ಗಂಟುಗಳು (ಗಡ್ಡೆಗಳು) ಕಾಣಿಸಿಕೊಳ್ಳುವುದು
  • ಚರ್ಮಗಡ್ಡೆಗಳು/ಗಂಟುಗಳು ಸಿಪ್ಪೆ ಸುಲಿದಂತೆ, ಒಡೆದು ಗಾಯವಾಗುವುದು
  • ಜಾನುವಾರುಗಳು ನೆಕ್ಕಿಕೊಳ್ಳುವುದರಿಂದ ಗಾಯಗಳು ಮತ್ತಷ್ಟು ದೊಡ್ಡದಾಗುವುದು
  • ನೊಣಗಳ ಹಾವಳಿಯಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗಬಹುದು
  • ಗರ್ಭ ಧರಿಸುವ ಜಾನುವಾರುಗಳಲ್ಲಿ ಗರ್ಭಪಾತವಾಗಬಹುದು
  • ಶ್ವಾಸಕೋಶದ ಸೋಂಕಿಗೆ ಒಳಗಾಗಿ ಸಾವನ್ನಪ್ಪಬಹುದು.
  • ರೋಗ ಹರಡುವಿಕೆ
  • ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ಕಚ್ಚುವ ನೊಣಗಳು ರೋಗವನ್ನು ಹರಡುತ್ತದೆ.
  • ಸೋಂಕಿತ ರಾಸುವಿನ ರಕ್ತ, ಕೀವು, ದೈಹಿಕ ಸ್ರಾವಗಳ ನೇರ ಸಂಪರ್ಕದಿಂದಲೂ ರೋಗಾಣುಗಳು ಅಂಟಬಹುದು.
  • ಸೋಂಕು ತಗುಲಿದ ನಂತರ ಒಂದು ವಾರದಿಂದ ಐದು ವಾರದೊಳಗೆ ರೋಗ ಲಕ್ಷಣಗಳು ಪ್ರಾರಂಭವಾಗಬಹುದು
  • ರೋಗ ತಡೆಗೆ ವಹಿಸಬೇಕಾದ ಕ್ರಮಗಳೇನು?
  • ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಬೇರ್ಪಡಿಸಬೇಕು
  • ಸೊಳ್ಳೆಗಳು, ನೊಣಗಳ ಹಾವಾಳಿಯಿಂದ ತಪ್ಪಿಸಲು ಕೀಟ ನಿವಾರಕ ಔಷಧ ಸಿಂಪಡಿಸಬೇಕು
  • ರೋಗ ನಿರೋಧಕ ಲಸಿಕೆಯನ್ನು 4-6 ತಿಂಗಳು ವಯಸ್ಸಿನ ಮೇಲ್ಪಟ್ಟ ಜಾನುವಾರುಗಳಿಗೆ ಹಾಕಬೇಕು
  • ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಬೇಕು. ಸೂಕ್ತವಾದ ಅಂಟು, ಜಾಡ್ಯ ನಿವಾರಕವಾದ ಶೇ.2 ರಷ್ಟು ಛ್ಞಿಟ್ಝ ದ್ರಾವಣವನ್ನುಪಶುವೈದ್ಯರ ಸಲಹೆಯ ಮೇರೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಸಿಂಪಡಿಸಬೇಕು
  • ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಕಳೇಬರಕ್ಕೆ ಸೋಂಕು ನಿವಾರಕಗಳನ್ನು ಸಿಂಪಡಿಸಿ ಆಳವಾದ ಗುಂಡಿ ತೆಗೆದು ಹೂಳಬೇಕು
  • ರೋಗ ಕಾಣಿಸಿಕೊಂಡ ಹಳ್ಳಿ ಹೊರತು ಪಡಿಸಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ಹಳ್ಳಿಯ ರಾಸುಗಳಿಗೆ ರೋಗ ನಿರೋಧಕ ಲಸಿಕೆ ಕೊಡಿಸಬೇಕು
  • ರೋಗಗ್ರಸ್ಥ ಜಾನುವಾರುಗಳನ್ನು ಮೇಯಲು ಬಿಡಬಾರದು. ಕಾಲುವೆ, ಕೆರೆಗಳಿಗೆ ನೀರುಣಿಸಲು ಹಾಗೂ ಮೈತೊಳೆಯಲು ಕರೆದೊಯ್ಯಬಾರದು. ಅವುಗಳನ್ನು ಪ್ರತ್ಯೇಕಿಸಿ ಆರೈಕೆ ಮಾಡಬೇಕು.


ರ್ಮಗಂಟು ರೋಗ ಕಾಣಿಸಿಕೊಂಡ ತಕ್ಷಣ ಆತಂಕ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ರೋಗ ಬಾರದಂತೆ ತಡೆಯಲು ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣದಲ್ಲಿದ್ದು, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ರೋಗ ಹರದಂತೆ ತಡೆಯಲು ಇಲಾಖೆ ಸೂಚಿಸುವ ನಿರ್ದೇಶನಗಳನ್ನು ರೈತರು ಪಾಲಿಸಿದರೆ ಸಾಕು. ಜಾನುವಾರುಗಳು ಮೃತಪಟ್ಟರೆ ಸರ್ಕಾರದಿಂದ 20 ಸಾವಿರ ರೂ. ನೆರವು ನೀಡಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ರೋಗದಿಂದ ಮೃತಪಟ್ಟ ಹಸುವಿಗೆ ಸಂಬಂಧಪಟ್ಟಂತೆ ಪರಿಹಾರವನ್ನು ಸದ್ಯದಲ್ಲಿಯೇ ಮಾಲೀಕರಿಗೆ ನೀಡಲಾಗುವುದು.
ಬಿ.ಎನ್. ಷಡಕ್ಷರಮೂರ್ತಿ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ