ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದಲ್ಲಿ ಫೆ.26ರಿಂದ ಮಾ.5ರವರೆಗೆ ನಡೆಯಲಿರುವ ಭಾರಿ ದನಗಳ ಜಾತ್ರಾ ಮಹೋತ್ಸವ ಪ್ರಚಾರ ರಥಯಾತ್ರೆಗೆ ಪಟ್ಟಣದ ಐದು ದೀಪ ವೃತ್ತದಲ್ಲಿ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಸಂಜೆ ಚಾಲನೆ ನೀಡಿದರು.
ಶ್ರೀ ಶಿವಬಸವಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದ ದನಗಳ ಜಾತ್ರಾ ಮಹೋತ್ಸವ ಒಂದು ಐತಿಹಾಸಿಕ ಮತ್ತು ಪರಂಪರಾನುಗತವಾದುದು. ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ಜಾತ್ರೆ ಪ್ರಾರಂಭಗೊಳ್ಳುತ್ತದೆ. ಈ ಜಾತ್ರಾ ಮಹೋತ್ಸವವು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿದೆ. ರೈತರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಫೆ.26ರಂದು ಪ್ರಾರಂಭಗೊಳ್ಳುವ ದನಗಳ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ರಾಸುಗಳು ಬಂದು ಸೇರುತ್ತವೆ. ಮಾ.2ರಂದು ಸಾಮೂಹಿಕ ಉಚಿತ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಆಸಕ್ತ ವಧು-ವರರು ಫೆ.20ರ ಒಳಗಾಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಮಾ.4ರಂದು ಶ್ರೀ ಮಹದೇಶ್ವರಸ್ವಾಮಿ ಹಾಗೂ ಶ್ರೀ ಸಿದ್ದಲಿಂಗಸ್ವಾಮಿ ಮಹಾರಥೋತ್ಸವ ಮತ್ತು ಮಾ.5ರಂದು ತೆಪ್ಪೋತ್ಸವ ನಡೆಯಲಿದೆ. ಜಾತ್ರೆಯಲ್ಲಿ 8 ದಿನಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಭಾಗವಹಿಸುವ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಹಾಗಾಗಿ ರೈತರು ನೋಂದಣಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾದ್ಯಂತ ರಥಯಾತ್ರೆ: ಬೇಬಿ ಬೆಟ್ಟದ ದನಗಳ ಜಾತ್ರಾ ಮಹೋತ್ಸವದ ಪ್ರಚಾರ ರಥ ಯಾತ್ರೆ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಜಾತ್ರೆ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ತಾ.ಪಂ. ಇಒ ಲೋಕೇಶ್ ಮೂರ್ತಿ, ರೈತ ಸಂಘದ ಕಾರ್ಯದರ್ಶಿ ವೈ.ಪಿ. ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ, ಮುಖಂಡರಾದ ಹರವು ಪ್ರಕಾಶ್, ಎಚ್.ಎಲ್.ಮುರಳೀಧರ್, ಬಲರಾಮೇಗೌಡ, ಲಕ್ಷ್ಮೇಗೌಡ, ಚಿಕ್ಕಾಡೆ ವಿಜೇಂದ್ರ, ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಮುಖಂಡರಾದ ಬೇಬಿ ಗ್ರಾಮದ ಸಿದ್ದರಾಜು, ಕುಮಾರ್, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇತರರು ಇದ್ದರು.