ಮಡಿಕೇರಿ:
ಕುಶಾಲನಗರದ ಶ್ರೀ ಮಹಾಗಣಪತಿ ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶನಿವಾರ ಮತ್ತು ಭಾನುವಾರ ಇಲ್ಲಿನ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ ಜಾನುವಾರು ಜಾತ್ರೆ ಗಮನ ಸೆಳೆಯಿತು. ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡನ್ನು ಜನಸಾಮಾನ್ಯರಿಗೆ ಕಟ್ಟಿಕೊಡುವ ನಿಟ್ಟಿನಲ್ಲಿ ಕೃಷಿ ಬದುಕಿಗೆ ಪ್ರೋತ್ಸಾಹಕ ರೂಪದಲ್ಲಿ ನಡೆದ ಈ ಕಾರ್ಯಕ್ರಮ ವಿಶೇಷವಾಗಿತ್ತು. ಜಾತ್ರಾ ಮೈದಾನದ ತುಂಬಾ ವಿವಿಧ ತಳಿ, ಆಕಾರ, ಗಾತ್ರದ ಜಾನುವಾರುಗಳು ಸೇರಿಕೊಂಡು ನಗರದೊಳಗೊಂದು ಹಳ್ಳಿಯ ವಾತಾವರಣದ ಸೃಷ್ಟಿ ಆಗಿತ್ತು.
ಕುಶಾಲನಗರ ರಥೋತ್ಸವದಲ್ಲಿ ಜಾನುವಾರು ಜಾತ್ರೆಯೂ ಪಾರಂಪರಗತವಾಗಿ ನಡೆದುಕೊಂಡು ಬಂದಿದೆ. ಮೈಸೂರು ಮತ್ತು ಹಾಸನ ಜಿಲ್ಲೆಯ ಗಡಿಯಲ್ಲಿರುವ ಕೊಡಗಿನ ಕುಶಾಲನಗರದ ಸುತ್ತ ಮುತ್ತಲ ಪ್ರದೇಶಗಳು ಕೃಷಿಪ್ರಧಾನವಾಗಿದ್ದ ಕಾರಣ ಕುಶಾಲನಗರದಲ್ಲಿ ನಡೆಯುವ ಜಾನುವಾರು ಜಾತ್ರೆ ವಿಶೇಷ ಮಹತ್ವ ಪಡೆದುಕೊಂಡಿದೆ.
ಬದಲಾದ ಕೃಷಿ ಪದ್ಧತಿ, ಯಾಂತ್ರೀಕರಣದ ಪ್ರಭಾವ, ವ್ಯವಸಾಯದ ಮೇಲೆ ಕಡಿಮೆಯಾಗಿರುವ ಆಶಕ್ತಿ, ಪಶುಪಾಲನೆಯಿಂದ ವಿಮುಖರಾಗುತ್ತಿರುವ ರೈತರು.. ಹೀಗೆ ವಿವಿಧ ಕಾರಣಗಳಿಂದ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಕುಶಾಲನಗರದ ಜಾನುವಾರು ಜಾತ್ರೆ ಸಿಕ್ಕಿದ ಪ್ರತಿಕ್ರಿಯೆಯಿಂದ ಸಂಘಟಕರ ಉತ್ಸಾಹ ಇಮ್ಮಡಿಯಾಗಿತ್ತು.
ಕುಶಾಲನಗರ, ಸೋಮವಾರಪೇಟೆ, ಪಕ್ಕದ ಮೈಸೂರು ಜಿಲ್ಲೆಯ ಹಾರನಹಳ್ಳಿ ಹೋಬಳಿ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರೈತರ ಜತೆ ಈ ವರ್ಷ ಸಂಘಟಕರ ನಿರೀಕ್ಷೆಗೂ ಮೀರಿ ದೂರದ ಊರುಗಳಿಂದಲೂ ರೈತರು ಜಾನುವಾರುಗಳನ್ನು ಕರೆತರುವ ಮೂಲಕ ಜಾನುವಾರು ಜಾತ್ರೆಯ ಕಳೆ ಹೆಚ್ಚಿಸಿದರು.
ಇದೇ ವೇಳೆ ಕೃಷಿ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಪಶುಸಂಗೋಪನೆ ಇಲಾಖೆ ವತಿಯಿಂದ ಸಾಕು ಪ್ರಾಣಿಗಳಿಗೆ ಉಚಿತವಾಗಿ ಕೊಡಲಾದ ರೇಬಿಸ್ ಚುಚ್ಚುಮದ್ದುಗಳನ್ನು 75 ನಾಯಿಗಳಿಗೆ ನೀಡಲಾಯಿತು.
30 ವಿಭಾಗಗಳಲ್ಲಿ ಬಹುಮಾನಕ್ಕಾಗಿ ರಾಸುಗಳನ್ನು ಗುರುತಿಸುವ ಪ್ರಕ್ರಿಯೆ ಈ ಜಾತ್ರೆಯಲ್ಲಿ ನಡೆಯಿತು. 136 ಜಾನುವಾರುಗಳು, 4 ನಾಯಿಗಳು, 4 ಕುರಿಗಳು, 5 ಮೇಕೆಗಳು, 2 ಬೆಕ್ಕುಗಳು, 2 ಪಾರಿವಾಳ, 2 ಮೊಲ ಹಾಗೂ 6 ಕೋಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.