ಜಿಲ್ಲೆ

ಜಕ್ಕಲಮಡುಗು ಡ್ಯಾಂ ಬಳಿ ಗೋಮಾಳ ಕಬ್ಜ: 300 ಎಕರೆಗೂ ಹೆಚ್ಚು ಪ್ರದೇಶಕ್ಕೆ ಅಕ್ರಮ ಬೇಲಿ

ಆರ್​​​.ತುಳಸಿಕುಮಾರ್​

ಬೆಂಗಳೂರು: ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ಜಕ್ಕಲಮಡುಗು ಜಲಾಶಯದ ಬಳಿಯಿರುವ ಗುಡ್ಡಗಳಲ್ಲಿನ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳು ರಾತ್ರೋ ರಾತ್ರಿ ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡಿ ಕಬ್ಜ ಮಾಡಿಕೊಳ್ಳುತ್ತಿದ್ದಾರೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮ ಭೂಕಬಳಿಕೆ ಕುರಿತು ತಾಲೂಕು ಹಾಗೂ ಜಿಲ್ಲಾಡಳಿತ ಮೌನವಹಿಸಿರುವುದು ಸ್ಥಳೀಯರನ್ನು ಭೂರಹಿತರನ್ನಾಗಿಸುವ ಆತಂಕ ಮೂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯಲ್ಲಿರುವ ಜಕ್ಕಲಮಡುಗು ಆಸುಪಾಸು ಬೆಟ್ಟಗುಡ್ಡಗಳಿಂದ ಆವೃತ್ತವಾಗಿವೆ. ಒಂದು ಕಡೆ ಜಲಾಶಯ ಇನ್ನೊಂದು ಬದಿಯಲ್ಲಿ ಅರಣ್ಯ ಪ್ರದೇಶವಿದೆ. ಜನವಸತಿ ಇಲ್ಲದ ಆಯಾಕಟ್ಟಿನ ಜಾಗ ಎನಿಸಿರುವ ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೂಡ ನಡೆಯುತ್ತಿಲ್ಲ. ಇಂತಹ ಪ್ರಶಾಂತ ವಾತಾವರಣದಲ್ಲಿರುವ ಗೋಮಾಳ ಜಾಗವನ್ನು ನಕಲಿ ದಾಖಲೆ ಬಳಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುವ ಯತ್ನ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ತೂಬಗೆರೆ ಹೋಬಳಿಯ ಕಲ್ಲುಕುಂಟೆ, ಬಾಲಕುಂಟನಹಳ್ಳಿ, ಮುಖಡಿಘಟ್ಟ, ನೆಲಕದಿರೇನಹಳ್ಳಿ, ಬಿಕ್ಕಲಹಳ್ಳಿ ಸೇರಿ ಏಳೆಂಟು ಗ್ರಾಮಗಳಲ್ಲಿ ಸುಮಾರು 300-400 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಗುಡ್ಡವನ್ನು ಭಾರಿ ಯಂತ್ರಗಳನ್ನು ಬಳಸಿ ಸಮತಟ್ಟು ಮಾಡಲಾಗಿದೆ. ಕಳೆದ 6 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಅಚ್ಚರಿ ಎಂದರೆ ಸ್ಥಳೀಯ ಪಂಚಾಯ್ತಿಯ ಗ್ರಾಮ ಲೆಕ್ಕಿಗ, ಪಿಡಿಒ ಕೂಡ ಸ್ಥಳ ಪರಿಶೀಲನೆ ನಡೆಸಿಲ್ಲ. ಇದನ್ನು ಗಮನಿಸಿದರೆ ಅಧಿಕಾರಿ ವರ್ಗವೇ ಸರ್ಕಾರಿ ಜಮೀನು ಕಬಳಿಕೆಗೆ ಪರೋಕ್ಷ ಬೆಂಬಲ ನೀಡಿರುವಂತಿದೆ ಎಂಬ ಅನುಮಾನ ಎದ್ದಿದೆ.

ಪೋಡಿ ಆಗದ ಜಮೀನುಗಳಿಗೆ ಗಾಳ?:

ಜಕ್ಕಲಮಡುಗು ಜಲಾಶಯಕ್ಕೆ ಹೊಂದಿಕೊಂಡಿರುವ ಗುಡ್ಡ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಜತೆಗೆ ಜಲಾಶಯದ ನೀರನ್ನು ಕುಡಿಯಲು ಬಳಸುತ್ತಿರುವ ಕಾರಣ ಅಲ್ಲಿನ ಗೋಮಾಳವನ್ನು ಯಾರಿಗೂ ಮಂಜೂರಾತಿ ನೀಡುತ್ತಿಲ್ಲ. ದಶಕಗಳ ಹಿಂದೆಯೇ ಮಾಜಿ ಕಂದಾಯ ಸಚಿವರಾಗಿದ್ದ ಆರ್.ಎಲ್.ಜಾಲಪ್ಪ ತಮ್ಮ ತವರೂರು ತೂಬಗೆರೆ ಬಳಿಯಿರುವ ಈ ಜಲಾಶಯದ ಮಹತ್ವವನ್ನು ಅರಿತು ಸರ್ಕಾರಿ ಜಮೀನನ್ನು ಭೂರಹಿತರಿಗೆ ಮಂಜೂರಾತಿ ನೀಡಿರಲಿಲ್ಲ. ಬದಲಾಗಿ ಬೇರೆಡೆ ಜಮೀನು ಹಂಚಿಕೆ ಮಾಡಲಾಗಿತ್ತು. ಆದರೀಗ, ರಾಜಧಾನಿ ಬೆಂಗಳೂರಿನ ಭೂಗಳ್ಳರು ಕುಗ್ರಾಮಗಳಿಗೆ ತೆರಳಿ ಸರ್ಕಾರಿ ಜಮೀನು ಕೈವಶಕ್ಕೆ ಚಿತಾವಣೆ ನಡೆಸಿದ್ದಾರೆ.

ಕಲ್ಲುಕೋಟೆ ಗ್ರಾಮದ ಗೋಮಾಳದಲ್ಲಿ ಸ್ಥಳೀಯ ರೈತರು ಜೀವನೋಪಾಯಕ್ಕಾಗಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರಿಗಷ್ಟೇ ಸರ್ಕಾರದಿಂದ ಭೂ ಮಂಜೂರಾತಿ ಆಗಿದೆಯೆ ಹೊರತು, ಈವರೆಗೂ ಪೋಡಿ ಆಗಿಲ್ಲ. ಇದನ್ನು ದುರ್ಬಳಕೆ ಮಾಡಿಕೊಂಡು ರೈತರಿಂದ ಜಮೀನು ಖರೀದಿಸಿ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಜಮೀನಿನ ಬದಿಯಲ್ಲಿರುವ ಗೋಮಾಳ ಜಾಗವನ್ನು ಸೇರಿಸಿ ತಂತಿಬೇಲಿ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ಜಾಣಕುರುಡು?:

ಜಕ್ಕಲಮಡುಗು ಜಲಾಶಯಕ್ಕೆ ಹೊಂದಿಕೊಂಡಂತೆ ವಿಸ್ತಾರವಾದ ಅರಣ್ಯ ಪ್ರದೇಶ ಇದೆ. ಇಲ್ಲಿ ಚಿರತೆ, ಕಾಡುಹಂದಿ, ನವಿಲು ಸೇರಿ ಹಲವು ಖಗ ಮೃಗಗಳು ನೆಲಗೊಂಡಿವೆ. ಹಾಗಾಗಿ ಸ್ಥಳೀಯರು ಈ ಜಲಾಶಯದಿಂದ ದೂರವಿದ್ದಾರೆ. ಅರಣ್ಯಾಧಿಕಾರಿಗಳು ಇತ್ತ ಸುಳಿಯುವುದಿಲ್ಲ. ಪ್ರಸ್ತುತ ನಗರಗಳಲ್ಲಿ ಅರಣ್ಯ ಭೂಮಿ ಒತ್ತುವರಿ ಬಗ್ಗೆ ನೋಟಿಸ್ ಜಾರಿಮಾಡುವ ಅಧಿಕಾರಿಗಳು ಗ್ರಾಮೀಣ ಭಾಗವನ್ನು ಮರೆತಂತಿದೆ. ಇದು ಒತ್ತುವರಿದಾರರಿಗೆ ವರದಾನ ಆಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಸ್ಥಳೀಯರಿಗಿಲ್ಲದ ಗ್ರಾಂಟ್ ನಗರವಾಸಿಗಳಿಗೆ ಏಕೆ:

ಗ್ರಾಮೀಣ ಭಾಗದಲ್ಲಿ ಗೋಮಾಳ ಜಾಗವನ್ನು ಸ್ಥಳೀಯ ಅಗತ್ಯತೆಗೆ ಬಳಸಿಕೊಳ್ಳಲು ಅವಕಾಶ ಇದೆ. ಕೆಲ ವಿಶೇಷ ಪ್ರಕರಣಗಳಲ್ಲಿ ಸಣ್ಣ ಹಿಡುವಳಿದಾರರು, ಸ್ಥಳೀಯ ಭೂರಹಿತರಿಗೆ ಮಾತ್ರ ಕೃಷಿಗಾಗಿ ಗ್ರಾಂಟ್ ಮಾಡಬಹುದು. ಆದರೆ, ಜಕ್ಕಲಮಡುಗು ಸುತ್ತಮುತ್ತಲಿನ ಗುಡ್ಡದ ಜಾಗವನ್ನು ಯಾರಿಗೂ ಹಂಚಿಕೆ ಮಾಡಿಲ್ಲ. ಈಗಲೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಸರ್ಕಾರಿ ಗೋಮಾಳ ಎಂದೇ ನಮೂದಾಗಿದೆ. ವಸ್ತುಸ್ಥಿತಿ ಹೀಗಿದ್ದರೂ, ನಗರವಾಸಿಗಳು ಇಲ್ಲಿಗೆ ಬಂದು ನಮ್ಮ ಗ್ರಾಮಗಳ ಜಮೀನನ್ನು ನಕಲಿ ದಾಖಲೆ ಬಳಸಿ ಕಬ್ಜ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಮಂಜೂರಾತಿ ಮುದ್ರೆ ಒತ್ತುತ್ತಿರುವುದು ಏಕೆ ಎಂಬುದು ಇಲ್ಲಿನ ಹಳ್ಳಿಗರು ಸರ್ಕಾರನ್ನು ಪ್ರಶ್ನಿಸಿದ್ದಾರೆ.

ಗೋಮಾಳಕ್ಕೆ ಗಾಳ ಎಲ್ಲೆಲ್ಲಿ?:

ತೂಬಗೆರೆ ಹೋಬಳಿಯ ಕಲ್ಲುಕುಂಟೆ, ಬಾಲಕುಂಟನಹಳ್ಳಿ, ಮುಖಡಿಘಟ್ಟ, ನೆಲಕದಿರೇನಹಳ್ಳಿ, ಬಿಕ್ಕಲಹಳ್ಳಿ ಸೇರಿ ಏಳೆಂಟು ಗ್ರಾಮಗಳು.

ಜಕ್ಕಲಮಡುಗು ಜಲಾಶಯ ಹೆಚ್ಚಿನ ಜನವಸತಿ ಇಲ್ಲದ ಕಡೆ ನಿರ್ಮಾಣವಾಗಿದೆ. ಇಲ್ಲಿನ ಗುಡ್ಡಗಳನ್ನು ಗೋಮಾಳದ ಹೆಸರಿನಲ್ಲಿ ಕೈವಶ ಮಾಡಿಕೊಳ್ಳಲು ಭಾರಿ ಯಂತ್ರಗಳನ್ನು ಬಳಸಿ ಗುಡ್ಡ ಅಗೆಯಲಾಗುತ್ತಿದೆ. ಪರಿಸರ ವಿರೋಧಿ ನಡೆಯಾಗಿರುವ ಈ ಕೃತ್ಯವನ್ನು ತಡೆಯಲು ಸ್ಥಳೀಯರು ಹೆದರುತ್ತಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಈ ಭೂಕಬಳಿಕೆಯನ್ನು ತಡೆದು ಸರ್ಕಾರಿ ಜಮೀನನ್ನು ಉಳಿಸಬೇಕಿದೆ.

- ವಿಜಯ್ ನಿಶಾಂತ್, ಟ್ರೀ ಡಾಕ್ಟರ್