ಹುಬ್ಬಳ್ಳಿ: ಬದಲಾದ ಜೀವನಶೈಲಿಯಿಂದಾಗಿ ಇಂದು ಅನೇಕರಿಗೆ ಕಡಿಮೆ ವಯಸ್ಸಿನಲ್ಲಿಯೇ ಹೃದಯದ ಕಾಯಿಲೆಗಳು ಆವರಿಸುತ್ತಿವೆ. ಮೊದಲೆಲ್ಲ ಮಕ್ಕಳು ಹಿರಿಯರನ್ನು ವೈದ್ಯಕಿಯ ಉಪಚಾರಕ್ಕೆ ಕರೆತರುತ್ತಿದ್ದರು. ಆದರೆ, ತಂದೆ ತಾಯಿಗಳೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂದು ಸಂಸದ, ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ವಿದ್ಯಾನಗರ ಅಶೋಕ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕ್ಯಾಥಲ್ಯಾಬ್ ಹಾಗೂ ಡಯಾಲಿಸಿಸ್ ಟಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಇಂದು 15 ಕೋಟಿಗೂ ಮಿಕ್ಕಿ ಸಕ್ಕರೆ ಕಾಯಿಲೆ ಉಳ್ಳವರು, 15 ಕೋಟಿ ಜನ ಇಂತಹ ಕಾಯಿಲೆಗೆ ಸಮೀಪದಲ್ಲಿದ್ದಾರೆ. ಈ ಎಲ್ಲವುಗಳಿಗೆ ಒತ್ತಡದ ಜೀವನ, ಅತಿಯಾದ ಚಿಂತೆ, ಹೆಚ್ಚಿನ ಆಸೆಗಳೇ ಕಾರಣವಾಗುತ್ತಿವೆ ಎಂದರು.
ಅಶೋಕಾ ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಇದರಿಂದ ಹೃದಯಾಘಾತವಾದಾಗ ತಕ್ಷಣಕ್ಕೆ ಚಿಕಿತ್ಸೆ ನೀಡಿ ರೋಗಿಯನ್ನು ಕಾಯಿಲೆಯಿಂದ ದೂರ ಇಡಬಹುದು. ವೈದ್ಯರುಗಳೇ ಸೇರಿ ಇಲ್ಲಿ ಆಸ್ಪತ್ರೆ ನಿಮಿರ್ಸಿರುವುದರಿಂದ ಯಾವುದೇ ಲಾಭದ ಆಸೆ ಇಲ್ಲದೇ ಮಾನವೀಯ ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದಲ್ಲಿ 6500 ಕ್ಯಾಥ್ ಲ್ಯಾಬ್ ಅಗತ್ಯ ಇದೆ. ಆದರೆ, ಅಷ್ಟು ಪ್ರಮಾಣದಲ್ಲಿ ಇಲ್ಲ. ಈ ದಿಸೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಜಂಟಿಯಾಗಿ ಜನರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಆಸ್ಪತ್ರೆಯಲ್ಲಿ ರೋಗಿಗೆ ಮೊದಲು ಚಿಕಿತ್ಸೆ ನೀಡಬೇಕು. ಆತನ ಆಥಿರ್ಕ ಸ್ಥಿತಿಗತಿ ನೋಡಿಕೊಂಡು ಇರುವುದರಲ್ಲಿಯೇ ಉತ್ತಮ ಚಿಕಿತ್ಸೆ ನೀಡಿ ಆತನ ಮುಖದಲ್ಲಿ ನಗು ತರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಶೋಕಾ ಆಸ್ಪತ್ರೆಯು ಜನಸ್ನೇಹಿಯಾಗಿ ಬೆಳೆಯಲಿ, ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಲಿ ಎಂದು ಹಾರೈಸಿದರು.
ವೈದ್ಯಕಿಯವು ಶ್ರೇಷ್ಠ ವೃತ್ತಿ:
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬಹಳಷ್ಟು ಕಷ್ಟ ಪಟ್ಟು ವೈದ್ಯರು ಸೇರಿ ಆಸ್ಪತ್ರೆ ಆರಂಭಿಸಿದ್ದಾರೆ. ಇದರ ಮೂಲಕ ಸಮಾಜದಲ್ಲಿ ಉತ್ತಮ ಮನೋಭೂಮಿಕೆ ಬೆಳೆಸುತ್ತಿದ್ದಾರೆ. ವೈದ್ಯ ವೃತ್ತಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠವಾದದ್ದಾಗಿದೆ. ಮನುಷ್ಯನ ನೋವು ನಿವಾರಣೆ ಮಾಡುವ ಶಕ್ತಿ ದೇವರಿಗೆ ಬಿಟ್ಟರೆ ವೈದ್ಯರಿಗೆ ಮಾತ್ರ ಇರುವುದು. ದೇಶದ ವೈದ್ಯರು ಎಲ್ಲ ಆಯಾಮದಲ್ಲಿಯೂ ಸಮರ್ಥರಿದ್ದಾರೆ. ಆದರೆ, ಅದಕ್ಕೆ ಪೂರಕವಾಗಿ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕಿದೆ ಎಂದರು. ನಾನು ಸಿಎಂ ಇದ್ದಾಗ ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಆಸ್ಪತ್ರೆ ತರಲು ಯತ್ನಿಸಿದೆ. ಅದರ ಕಟ್ಟಡ ಈಗ ಪೂರ್ಣಗೊಳ್ಳುತ್ತಿದೆ. ವೈದ್ಯಕಿಯ ಕ್ಷೇತ್ರದಲ್ಲಿ ಬಹಳಷ್ಟು ಸವಾಲುಗಳಿವೆ. ಅವುಗಳನ್ನು ಸಮರ್ಪಕವಾಗಿ ಎದುರಿಸಿ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎಂದರು.
ಸೇವಾ ಕಾರ್ಯ ವಿಸ್ತರಣೆ:
ಆಸ್ಪತ್ರೆ ಮುಖ್ಯಸ್ಥ ಡಾ. ಅಶೋಕ ಬಂಗಾರಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ದಶಕದಿಂದ ಕಣ್ಣಿನ ಚಿಕಿತ್ಸೆಯಲ್ಲಿ ಹೆಸರು ಮಾಡಿರುವ ಅಶೋಕಾ ಆಸ್ಪತ್ರೆಯು ಹಂತಹಂತವಾಗಿ ಎಲ್ಲ ಸೌಲಭ್ಯಗಳನ್ನು ಒಂದೇ ಕಡೆ ಕಲ್ಪಿಸಿದೆ. ಅಕ್ಕಪಕ್ಕದ ಆರು ಜಿಲ್ಲೆಗಳಲ್ಲಿ ನೇತ್ರ ತಪಾಸಣೆ ಶಿಬಿರ ಮಾಡಲಾಗಿದೆ. ಇದೀಗ ಆರೋಗ್ಯ ಸೇವೆ ವಿಸ್ತರಣೆ ಮಾಡಲು ಹೃದ್ರೋಗಿಗಳ ಅನುಕೂಲಕ್ಕಾಗಿ ಕ್ಯಾಥಲ್ಯಾಬ್ ಹಾಗೂ ಡಯಾಲಿಸಿಸ್ ಟಕ ಆರಂಭಿಸಲಾಗಿದೆ. ನುರಿತ ತಜ್ಞರು ಹೃದಯ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡುವ ಬದ್ಧತೆ ಹೊಂದಿದ್ದಾರೆ. ಆಯುಷ್ಮಾನ, ಯಶಸ್ವಿನಿ ಯೋಜನೆ ಅಡಿ ಬಡ, ಮಧ್ಯಮ ವರ್ಗದ ಜನರಿಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುವುದು ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಡಾ. ನವೀನ ಪಟ್ಟಣಶೆಟ್ಟಿ, ಎಸ್.ವಿ. ತೆಗ್ಗಿ, ಡಾ. ಪ್ರಕಾಶ, ಡಾ. ಶಿವಪ್ಪ ಆಲೂರಶೆಟ್ಟರ, ಡಾ. ವಿಜಯಮಹಾಂತೇಶ ಪೂಜಾರ, ಡಾ. ಅರುಣ ಕುಮಾರ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಕೆ.ವಿ. ಶಂಕರಗೌಡ್ರ, ಶರಣಪ್ಪ ಕೊಟಗಿ, ಇತರರು ಪಾಲ್ಗೊಂಡಿದ್ದರು.
ಚೈತ್ರಾ ಹಾಗೂ ಇತರರು ಪ್ರಾರ್ಥನೆ ಹಾಡಿದರು. ಹೃದಯ ರೋಗ ತಜ್ಞೆ ಡಾ. ಸೃಷ್ಟಿ ವಾಳದ ಅತಿಥಿಗಳನ್ನು ಪರಿಚಯಿಸಿದರು. ಆರ್ ಜೆ ಮಾಧುರಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆ ನಿರ್ದೇಶಕಿ ಡಾ. ವರ್ಷಾ ಬಂಗಾರಶೆಟ್ಟರ ವಂದಿಸಿದರು.