catfish pond 
ಜಿಲ್ಲೆ

ಕೆರೆ ಸೇರಲಿವೆಯೇ ರಾಕ್ಷಸ ಮೀನುಗಳು?

ಶಿವರಾಜ.ಎಂ

*ನಿಷೇಧಿತ ಕ್ಯಾಟ್‌ಫಿಶ್ ದಂಧೆ ಮತ್ತೆ ಆಕ್ಟೀವ್

ಮೀನುಗಾರಿಕೆಗೆ ದೊಡ್ಡಪೆಟ್ಟು


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸ್ಥಳೀಯವಾಗಿ ಜಲಚರಗಳ ಸಂಹಾರಕ ಎಂದೇ ಕುಖ್ಯಾತಿ ಪಡೆದಿರುವ, ಸರ್ಕಾರದಿಂದಲೇ ನಿಷೇಧಿಸ್ಪಟ್ಟಿರುವ ಆಫ್ರಿಕನ್ ಕ್ಯಾಟ್‌ಫಿಶ್ ದಂಧೆ ಜಿಲ್ಲೆಯ ಹಲವೆಡೆ ಸದ್ದಿಲ್ಲದೆ ಬೇರುಬಿಡುತ್ತಿದೆ. ಈ ರಾಕ್ಷಸ ಮೀನುಗಳು ಕೆರೆಗಳಿಗೆ ಸೇರಿದರೆ ಸ್ಥಳೀಯ ಮೂಲ ಮೀನುಗಳ ಸಂತತಿಯನ್ನೇ ಅಪೋಷನ ತೆಗೆದುಕೊಳ್ಳುವ ಆತಂಕ ಎದುರಾಗಿದೆ.
ಕಳೆದೆರಡು ವರ್ಷದಿಂದ ಸದ್ದಡಗಿದ್ದ ಆಪ್ರಿಕನ್ ಕ್ಯಾಟ್‌ಫಿಶ್ ಸಾಕಣೆ ದಂಧೆ ಮತ್ತೊಮ್ಮೆ ಆಕ್ಟೀವ್ ಆಗಿದೆ. ಇದೀಗ ಹೊರವಲಯಗಳ ಜಮೀನುಗಳಲ್ಲಿ ಹೊಂಡಗಳನ್ನು ಮಾಡಿ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಣೆ ಮಾಡುತ್ತಿವೆ. ಇವು ಪಾರ್ಥೆನೀಯಂ ಕಳೆಗಳಂತೆ ವೇಗವಾಗಿ ಬೆಳೆಯುತ್ತವೆ, ಇವುಗಳ ತಳಿ ಕೆರೆಗಳಿಗೆ ಸೇರಿದರೆ ಕೆಲವೇ ತಿಂಗಳಲ್ಲಿ ಕೆರೆಗಳಲ್ಲಿನ ಮೂಲ ಸ್ಥಳೀಯ ಮೀನುಗಳು ಸೇರಿ ಎಲ್ಲ ಬಗೆಯ ಜಲಚರಗಳನ್ನು ಅಪೋಷನ ತೆಗೆದುಕೊಳ್ಳಲಿದ್ದು, ಸ್ಥಳೀಯ ಮೀನುಗಾರಿಕೆಗೆ ದೊಡ್ಡಪೆಟ್ಟು ಬೀಳಲಿದೆ ಎಂಬ ಆತಂಕ ಎದುರಾಗಿದೆ. ಕೆರೆಗಳನ್ನು ಗುತ್ತಿಗೆ ಪಡೆದು ಲಕ್ಷಾಂತರ ರೂ. ಬಂಡವಾಳ ಹಾಕುವವರಿಗೆ ದೊಡ್ಡ ಹೊಡೆತ ಬೀಳಲಿದೆ. ಸ್ಥಳೀಯ ನಾಟಿ ಮೀನುಗಳ ನಾಮವಶೇಷಕ್ಕೆ ಕಾರಣವಾಗುವಂತ ರಾಕ್ಷಸ ಮೀನುಗಳ ಆರ್ಭಟ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ಅವಶ್ಯಕತೆ ಇದ್ದು ಈ ದಂಧೆಯನ್ನು ಬೇರುಸಹಿತ ನಿರ್ಮೂಲನೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಮೂರ‌್ನಾಲ್ಕು ವರ್ಷದ ಹಿಂದೆ ತಡೆ: ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವಧಿಯಲ್ಲಿ ಹೊಸಕೋಟೆ ತಾಲೂಕಿನಲ್ಲಿ ಈ ದಂಧೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು, ಕ್ರಮೇಣ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಗಡಿಭಾಗಕ್ಕೂ ವಿಸ್ತರಣೆಯಾಗಿತ್ತು. ಈ ಬಗ್ಗೆ ಎಚ್ಚೆತ್ತ ಜಿಲ್ಲಾಧಿಕಾರಿ ವಿಶೇಷ ಕಾರ್ಯಾಚರಣೆ ಮೂಲಕ ಜಿಲ್ಲೆಯಲ್ಲಿ ಕ್ಯಾಟ್‌ಫಿಶ್ ದಂಧೆಗೆ ಪೂರ್ಣವಿರಾಮ ಇಟ್ಟಿದ್ದರು. ಇದೀಗ ಮತ್ತೆ ಕ್ಯಾಟ್‌ಫಿಶ್ ದಂಧೆ ಗರಿಗೆದರಿದ್ದು, ಪರಿಸರ ನಾಶಕ, ಜಲಚರಗಳ ಸಂಹಾರಕನಿಗೆ ಜಿಲ್ಲೆಯೇ ರಹದಾರಿಯಾಗುತ್ತಿದೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಕ್ಯಾಟ್‌ಪಿಶ್ ಹೊಂಡಗಳು ದಿನೇ ದಿನೇ ಜಿಲ್ಲೆಯನ್ನು ಆಕ್ರಮಿಸಿಕೊಳ್ಳುತ್ತಿದೆ.

ಎಲ್ಲಿಂದ ಎಲ್ಲಿಗೆ ದಂಧೆ: ಪಶ್ಚಿಮ ಬಂಗಾಳದಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾಗೂ ಆಂಧ್ರ ಪ್ರದೇಶದಿಂದ ರಸ್ತೆ ಮಾರ್ಗದ ಮೂಲಕ ಜಿಲ್ಲೆಗೆ ಕ್ಯಾಟ್‌ಪಿಶ್ ಮರಿಗಳು ರವಾನೆಯಾಗುತ್ತಿವೆ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇಲ್ಲಿ ಬೆಳೆದ ಮೀನುಗಳು ಕಲ್ಕತ್ತಾ ಸೇರಿ ಉತ್ತರ ಪ್ರದೇಶ, ಅಹಮದಬಾದ್, ಮಹಾರಾಷ್ಟ್ರದ ಭಾಗಗಳಿಗೆ ಸಾಗಣೆಯಾಗುತ್ತದೆ ಎನ್ನಲಾಗಿದೆ. ಸ್ಥಳೀಯವಾಗಿ ಹೋಟೆಲ್, ಡಾಬಗಳಲ್ಲೂ ವಿವಿಧ ಹೆಸರಿನಲ್ಲಿ ಬಿಕರಿಯಾಗುತ್ತಿದೆ. ಆದರೆ ಹೊರಗಡೆ ರವಾನೆಯಾಗುವ ಪ್ರಮಾಣ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಭೂಮಿಯಲ್ಲಿ ಕಾನೂನು ಬಾಹಿರ ಚಟುವಟಿಕೆ:
ಗ್ರಾಮಾಂತರ ಜಿಲ್ಲೆಯ ಕೃಷಿಭೂಮಿ ಕಾನೂನುಬಾಹಿರ ಚಟುವಟಕೆಗಳಿಗೆ ಬಳಕೆಯಾಗುತ್ತಿದೆ. ಮುಖ್ಯವಾಗಿ ಮಾವು, ನೀಲಗಿರಿ ತೋಪುಗಳು ಕ್ಯಾಟ್‌ಪಿಶ್‌ಹೊಂಡಗಳಾಗಿ ಪರಿವರ್ತನೆಯಾಗುತ್ತಿವೆ. ಈ ದಂಧೆ ನಡೆಯುವ ಸುತ್ತಮುತ್ತಲಿನ ಜಮೀನಿನಲ್ಲಿ ಯಾವುದೇ ಸಲು ಕಾಣಲು ಸಾಧ್ಯವಿಲ್ಲ. ಕ್ಯಾಟ್‌ಪಿಶ್ ಭಕ್ಷಣೆಗೆ ಮುಗಿಬೀಳುವ ಹದ್ದು, ಗಿಡುಗ, ಕಾಗೆಯಂಥ ಪಕ್ಷಿಗಳು ಇತರ ಬೆಳೆಗಳಿಗೂ ಲಗ್ಗೆಹಾಕುತ್ತವೆ.

ಆಪ್ರಿಕನ್ ಕ್ಯಾಟ್‌ಪಿಷ್ ಜಲಚರಗಳ ಹಂತಕನಿದ್ದಂತೆ, ಇವುಗಳನ್ನು ಯಾವುದೇ ಜಲಮೂಲದಲ್ಲಿ ಬಿಟ್ಟರೂ ಅಲ್ಲಿನ ಜಲಚರಗಳನ್ನು ಭಕ್ಷಿಸಿ ಸಂತತಿಯನ್ನೇ ಸಂಪೂರ್ಣ ನಾಶ ಮಾಡುತ್ತದೆ. ಸ್ಥಳೀಯ ಸಂತತಿಗೆ ಮಾರಕವಾಗಿದೆ. ಆಫ್ರಿಕನ್ ಕ್ಯಾಟ್‌ಪಿಶ್ ಭಾರತದ ತಳಿಯಲ್ಲ. ಹೊರಗಡೆಯಿಂದ ಇಲ್ಲಿಗೆ ಆಮದು ಮಾಡಿಕೊಳ್ಳಲು ಪರವಾನಗಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ನಿರ್ಬಂಧಿಸಲಾಗಿದೆ.
ಸುಬ್ರಹ್ಮಣ್ಯ, ಸಹಾಯಕ ಅಧಿಕಾರಿ ಮೀನುಗಾರಿಕೆ ಇಲಾಖೆ