ಜಿಲ್ಲೆ

ಕ್ಯಾಟ್‌ಫಿಷ್ ಹೊಂಡಗಳಲ್ಲೇ ಮೀನುಗಾರಿಕೆ!, ಇಲಾಖೆಯಿಂದ ಪರ್ಯಾಯ ಉದ್ಯೋಗ ಮೀನು ಸಾಕಣೆದಾರರಿಗೆ ವರದಾನ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ನಿಷೇಧಿತ ಕ್ಯಾಟ್‌ಫಿಷ್ ಸಾಕಣೆ ನಿಂತಿರುವ ಹಿನ್ನೆಲೆಯಲ್ಲಿ ಆ ಹೊಂಡಗಳಲ್ಲೇ ಅಧಿಕೃತವಾಗಿ ಮೀನುಗಾರಿಕೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ಉದ್ಯಮ ಹೊಸ ಆಯಾಮ ಪಡೆಯುತ್ತಿದ್ದು, ಜಿಲ್ಲಾಡಳಿತ ಅದಕ್ಕೆ ಪೂರಕವಾಗಿ ಉದ್ಯಮ ಅಭಿವೃದ್ಧಿಗೆ ಮುಂದಾಗಿದೆ. ಕ್ಯಾಟ್‌ಫಿಷ್ ಹೊಂಡಗಳೇ ಸರ್ಕಾರದ ಅನುಮತಿಯೊಂದಿಗೆ ಸಾಂದ್ರತೆಯ ಮೀನುಗಾರಿಕೆಗೆ ಬಳಕೆಯಾಗುತ್ತಿವೆ.

ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕ್ಯಾಟ್‌ಫಿಷ್ ಸಾಕಣೆಯಲ್ಲಿ ತೊಡಗಿದ್ದವರು ಈಗ ಅಧಿಕೃತವಾಗಿ ವಿವಿಧ ತಳಿಯ ಮೀನುಗಳ ಸಾಕಣೆಗೆ ಮುಂದಾಗಿದ್ದಾರೆ.

ನಿರಂತರ ಕಾರ್ಯಾಚರಣೆ: ಕ್ಯಾಟ್‌ಫಿಷ್ ದಂಧೆ ನಿರ್ಮೂಲನೆಗೆ ಜಿಲ್ಲಾಡಳಿತ ನಿರಂತರ ಕಾರ್ಯಾಚರಣೆ ನಡೆಸಿತ್ತು. ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹಾಗೂ ತಂಡ ಹೊಸಕೋಟೆ ಭಾಗದಲ್ಲಿ ಮೊಕ್ಕಾಂ ಹೂಡಿ ನಿರಂತರವಾಗಿ ಹೊಂಡಗಳನ್ನು ತೆರವು ಮಾಡಿತ್ತು.

ಎಂಟಿಬಿ ಒತ್ತಡ: ಹೊಸಕೋಟೆ ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗಿದ್ದ ನಿಷೇಧಿತ ಕ್ಯಾಟ್‌ಪಿಷ್ ಸಾಕಣೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನ ಸೆಳೆದಿದ್ದರು.

ಸರ್ಕಾರದ ಸಹಾಯಧನ: ಈ ಹೊಸ ಮೀನುಗಾರಿಕೆಗೆ ಸರ್ಕಾರದ ಸಹಾಯಧನವೂ ಲಭ್ಯವಿದೆ. ಈ ಮೀನುಗಾರಿಕೆಗೆ ಸರ್ಕಾರದ ಅನುಮತಿ ಪಡೆಯಬೇಕು. 1 ಸಾವಿರ ರೂ. ಪಾವತಿಸಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಅನುಮತಿ ಬಳಿಕ ಮೀನು ಸಾಕಣೆ ಮಾಡಬಹುದು. ಜತೆಗೆ ಮೀನು ಮಾರಾಟದ ಸಂಪೂರ್ಣ ಹಕ್ಕು ಅವರಿಗೆ ಸೇರಿದ್ದಾಗಿರುತ್ತದೆ. ಸುಮಾರು 1 ಹೆಕ್ಟೇರ್ ಪ್ರದೇಶದಲ್ಲಿ ಈ ಉದ್ದಿಮೆ ಮಾಡುವ ಮೀನುಗಾರರಿಗೆ 4 ಲಕ್ಷ ರೂಪಾಯಿವರೆಗೆ ಸಬ್ಸಿಡಿ ದೊರೆಯುತ್ತದೆ. ಮೀನು ಸಾಕಣೆಗೆ ಬೇಕಾಗುವ ಆಹಾರ ಖರೀದಿಗೆ ಸಬ್ಸಿಡಿ ದೊರೆಯಲಿದೆ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಶೇ.60 ಹಾಗೂ ಇತರ ಜನಾಂಗದವರಿಗೆ ಶೇ.40 ಸಹಾಯಧನ ದೊರೆಯಲಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಹೊಸಕೋಟೆ ತಾಲೂಕಿನಲ್ಲಿ ನಡೆಯುತ್ತಿದ್ದ ಕ್ಯಾಟ್‌ಫಿಷ್ ಹೊಂಡಗಳಲ್ಲೇ ಸರ್ಕಾರದ ಅನುಮತಿ ಪಡೆದು ಮೀನು ಸಾಕಾಣಿಕೆಗೆ ಹಲವರು ಮುಂದಾಗಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಬೇಕಾದ ಮಾರ್ಗದರ್ಶನ ಹಾಗೂ ನೆರವು ನೀಡುತ್ತಿದ್ದು, ಇದೊಂದು ಹೊಸ ಉದ್ದಿಮೆಗೆ ನಾಂದಿ ಹಾಡಲಿದೆ. ಸುಬ್ರಹ್ಮಣ್ಯ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹೊಸಕೋಟೆ