ಜಿಲ್ಲೆ

ಕ್ಯಾಸಲರಾಕ್-ಗೋವಾ ರಸ್ತೆ ಬಂದ್

ಉತ್ತರ ಕನ್ನಡ ಡೆಸ್ಕ್

ಜೊಯಿಡಾ: ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಮಳೆ ಜೋರಾಗಿದ್ದು, ಇಲ್ಲಿನ ಲಕ್ಷ್ಮೀ ವಾಡಾ ಸೇತುವೆ ಭಾನುವಾರ ಬೆಳಗ್ಗೆ ಜಲಾವೃತವಾಗಿ ಸಂಚಾರಕ್ಕೆ ತೊಂದರೆಯುಂಟಾಯಿತು.

ಕ್ಯಾಸಲರಾಕ್-ಗೋವಾ ರಸ್ತೆ ಬಂದ್ ಆಗಿದ್ದು, ಕ್ಯಾಸಲರಾಕ್-ಚಾಂದೆವಾಡಿ-ರಾಮನಗರ ರಸ್ತೆಯ ಕಿರು ಸೇತುವೆ ಕೂಡ ಭಾನುವಾರ ಮಧ್ಯಾಹ್ನದವರೆಗೂ ನೀರಿನಲ್ಲಿ ಮುಳುಗಡೆಯಾಗಿತ್ತು. ಭಾನುವಾರದಂದು ರಾಮನಗರದಲ್ಲಿ ವಾರದ ಸಂತೆ ಮಾರುಕಟ್ಟೆ ನಡೆಯುತ್ತದೆ. ಆದ್ದರಿಂದ, ಕ್ಯಾಸಲರಾಕ್ ಪ್ರದೇಶದ ನಾಗರಿಕರು ಮಾರುಕಟ್ಟೆಗಾಗಿ ಬರುತ್ತಾರೆ. ಆದರೆ, ಎರಡೂ ಸೇತುವೆಗಳ ಮೇಲೆ ನೀರು ಬಂದಿದ್ದರಿಂದ ಜನ ಸಂತೆಗೆ ಬರಲಾಗದೆ ಪರದಾಟ ನಡೆಸುವಂತಾಯಿತು.

ಕಾನೇರಿ ನದಿಗೆ ನೀರಿನ ಹರಿವು ಹೆಚ್ಚಾಗಿರುವ ಕಾರಣ ಸುಪಾ ಜಲಾಶಯಕ್ಕೆ ಸುರಂಗದ ಮೂಲಕ ನೀರು ಹೋಗುವ ಕುಂಡಲ್ ಡ್ಯಾಂ ಭರ್ತಿಯಾಗಿ ಕುಂಡಲ್ ಸಂಪರ್ಕ ಸೇತುವೆ ಜಲಾಶಯದ ಹಿನ್ನಿರಿನಲ್ಲಿ ಮುಳುಗಿ ಸಂಪರ್ಕ ಕಡಿತವಾಗಿದೆ. ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ಲೊಂಡಾ ಸಮೀಪ ಹೊಸ ಸೇತುವೆ ಕುಸಿದಿರುವ ಕಾರಣ ರಸ್ತೆ ಕುಸಿಯುತ್ತಿದೆ.

ಸುಪಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಕಳೆದ ನಾಲ್ಕು ದಿನಗಳಿಂದ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ. ಸುಪಾ ಅಣೆಕಟ್ಟಿನ ಗರಿಷ್ಠ ಮಟ್ಟ 564 ಮೀ ಇದ್ದು, 536.15 ಮೀ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ನೀರಿನ ಹರಿವು 51435 ಕ್ಯೂಸೆಕ್ ಇದ್ದು, ಹೊರ ಹರಿವು ಇಲ್ಲ. ಕಳೆದ 24 ಗಂಟೆಗಳಲ್ಲಿ 105.40 ಮೀ.ಮೀ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದೆ.