| ಪರಶುರಾಮ ಕೆರಿ ಹಾವೇರಿ
ಹಾನಗಲ್ ಕ್ಷೇತ್ರದಲ್ಲಿ ಎಂದಿನಂತೆ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಗೆಲುವಿಗಾಗಿ ಕೊನೇ ಕ್ಷಣದ ಕಸರತ್ತು ನಡೆದಿದೆ. ಹಾನಗಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿದೆ. ಹೇಗಾದರೂ ಮಾಡಿ ಇಲ್ಲಿ ಗೆಲುವು ಸಾಧಿಸಿ ಸರ್ಕಾರಕ್ಕೆ ಮುಖಭಂಗ ಮಾಡಬೇಕು ಎಂಬ ಉದ್ದೇಶ ವಿಪಕ್ಷಗಳದ್ದು. ಈ ಉದ್ದೇಶ ವಿಫಲಗೊಳಿಸಬೇಕೆಂದು ಬಸವರಾಜ ಬೊಮ್ಮಾಯಿ ಅವರೇ ಕ್ಷೇತ್ರದಲ್ಲಿ ವಾರಗಟ್ಟಲೇ ಠಿಕಾಣಿ ಹೂಡಿದ್ದಾರೆ. ಕ್ಷೇತ್ರವನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಸಿಎಂ ನೇತೃತ್ವದಲ್ಲೇ ಕ್ಷೇತ್ರದಲ್ಲಿನ ಒಂದೂ ಜಾತಿಯವರನ್ನು ಬಿಡದೆ ಸಭೆ ನಡೆಸಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಜತೆಗೆ ಆಯಾ ಜನಾಂಗಕ್ಕೆ ಸರ್ಕಾರದಿಂದ ಸಿಕ್ಕಿರುವ ಸೌಲಭ್ಯಗಳು, ರಾಜಕೀಯ ಸ್ಥಾನಮಾನಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. ಕಾಂಗ್ರೆಸ್ ಸಹ ಜಾತಿ ಆಧಾರಿತ ಮತಗಳನ್ನು ಸೆಳೆಯಲು ಆಯಾ ಜಾತಿಯ ನಾಯಕರನ್ನು ಕ್ಷೇತ್ರಕ್ಕೆ ಕರೆಯಿಸಿ ಪ್ರಚಾರಕ್ಕೆ ಬಿಟ್ಟಿದೆ. ಅಲ್ಲದೆ, ಅಲ್ಪಸಂಖ್ಯಾತರ ಮತಗಳು ಜೆಡಿಎಸ್ ಅಭ್ಯರ್ಥಿಗೆ ಹೋಗದಂತೆ ತಡೆಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದಾರೆ. ಜಮೀರ್ ಅಹ್ಮದ್ ಅವರನ್ನು ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿಸಲಾಗಿದೆ.
ಕ್ಷೇತ್ರದಲ್ಲಿ ಪ್ರಮುಖವಾಗಿರುವ ಲಿಂಗಾಯತರ ಮತಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ಸ್ವತಃ ಸಿಎಂ ಅವರೇ ಕೈಗೆತ್ತಿಕೊಂಡಿದ್ದಾರೆ. ನಾನೇ ಸಿಎಂ ಇರುವುದರಿಂದ ಜಿಲ್ಲೆಯ ಜತೆಗೆ ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಲು ಬಿಜೆಪಿ ಬೆಂಬಲಿಸಬೇಕೆಂದು ಕೋರಿದ್ದಾರೆ. ತನ್ಮೂಲಕ ಲಿಂಗಾಯತ ಮತ ವಿಭಜನೆಯಾಗದಂತೆ ತಡೆಯುವ ಪ್ರಯತ್ನದಲ್ಲಿ ಯಶ ಕಾಣುತ್ತಿದ್ದಾರೆ. ಮೇಲ್ವರ್ಗದ ಮತಗಳನ್ನು ಸೆಳೆಯುವಲ್ಲಿ ಹಿನ್ನಡೆ ಆಗುತ್ತಿರುವುದು ಕಾಂಗ್ರೆಸ್ ಮುಖಂಡರಿಗೆ ಮನವರಿಕೆಯಾಗಿದ್ದು, ತನ್ನ ಸಾಂಪ್ರದಾಯಿಕ ಅಹಿಂದ ಮತಗಳು ವಿಭಜನೆ ಆಗದಂತೆ ತಡೆಯುವ ತಂತ್ರಕ್ಕೆ ಮುಂದಾಗಿದ್ದಾರೆ.
ಲಿಂಗಾಯತರ ನಂತರ ಹೆಚ್ಚಿನ ಸಂಖ್ಯೆಯಲ್ಲಿರುವ ಗಂಗಾಮತ ಸಮುದಾಯದ ಮತ ಕಬಳಿಸಲು ಎರಡೂ ಪಕ್ಷಗಳು ಆಯಾ ಸಮುದಾಯದ ಮುಖಂಡರನ್ನು ಅಖಾಡಕ್ಕಿಳಿಸಿವೆ. ಬಿಜೆಪಿಯಿಂದ ವಿಪ ಸದಸ್ಯ ಎನ್.ರವಿಕುಮಾರ 15 ದಿನಗಳಿಂದ ಬೀಡುಬಿಟ್ಟು ಕೈ ಪರವಾಗಿದ್ದ ಮತಗಳನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ. ಸಿಎಂ ಸಹ ಸಮಾಜದ ಸಭೆ ನಡೆಸಿ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಈಚೇಗೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು, ಸರ್ಕಾರಿ ಯೋಜನೆಗಳು, ಸಾಧನೆಗಳಿಗಿಂತ ಹೆಚ್ಚಾಗಿ ಜಾತಿ-ಧರ್ಮಗಳೇ ಪ್ರಚಾರದ ಸರಕಾಗಿದ್ದು, ಅದೇ ಆಧಾರದಲ್ಲಿ ಉಭಯ ಪಕ್ಷದಿಂದ ಮತಬೇಟೆ ನಡೆದಿದೆ. ಕಾಂಗ್ರೆಸ್ ಆಗಾಗ ಬೆಲೆ ಏರಿಕೆ, ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ಜತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರಕ್ಕಿಂತ ವೈಯಕ್ತಿಕ ಟೀಕೆಯೇ ಸದ್ದು ಮಾಡಿದೆ. ಸಿಎಂ ಹಾಗೂ ವಿಪಕ್ಷ ನಾಯಕರ ವಾಕ್ ಸಮರ ಜೋರಾಗಿದ್ದು, ಪರಸ್ಪರ ಬೊಟ್ಟು ಮಾಡಿದ್ದೇ ಹೆಚ್ಚು.
ಒಳಹೊಡೆತದ್ದೇ ಭಯ!: ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಒಳಹೊಡೆತ ಒಳಸುಳಿ ಅಗಿದೆ. ಹೊರಗಿನವರು ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೆ, ಸ್ಥಳೀಯ ನಾಯಕರು ಒಳಗೊಳಗೆ ಕುತಂತ್ರ ನಡೆಸುತ್ತಿರುವುದು ನುಂಗಲಾರದ ತುತ್ತಾಗಿದೆ. ಟಿಕೆಟ್ ವಂಚಿತರು, ಭಾವಿ ನಾಯಕರು ಒಳಗೊಳಗೆ ತಮ್ಮದೆ ಅಭ್ಯರ್ಥಿಯ ಸೋಲಿಗೆ ಎದುರಾಳಿಗಳೊಂದಿಗೆ ತಂತ್ರಗಾರಿಕೆ ರೂಪಿಸಿರುವುದು ಕಂಡುಬರುತ್ತಿದೆ.
ಕಾಂಚಾಣ ಕುಣಿತ: ಚುನಾವಣೆಗಳಲ್ಲಿ ಕತ್ತಲ ರಾತ್ರಿಯಂದು ಹೆಚ್ಚಾಗಿ ಕೇಳಿಬರುತ್ತಿದ್ದ ಕಾಂಚಾಣ ಸದ್ದು ಈ ಚುನಾವಣೆಯಲ್ಲಿ ಅದಕ್ಕೂ ಮೊದಲೇ ಜೋರಾಗಿ ಕೇಳಿಬರುತ್ತಿದೆ. ಜಾತಿ, ಸಂಘಟನೆ, ಸಂಘದ ಮುಖಂಡರಿಂದ ನಾನಾ ಬೇಡಿಕೆಗಳು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಕಾಂಚಾಣವೂ ಜೋರಾಗಿ ಹರಿದಾಡುತ್ತಿದೆ. ಕತ್ತಲ ರಾತ್ರಿಯಂದು ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಮತದ ಬೆಲೆ ಕ್ಷೇತ್ರದ ಇತಿಹಾಸದಲ್ಲಿಯೇ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಕಾದ ಜೆಡಿಎಸ್: ಚುನಾವಣೆಗೂ ಮುನ್ನವೇ ಜೆಡಿಎಸ್ನಿಂದ ನಿಯಾಜ್ ಶೇಖ್ ಅಭ್ಯರ್ಥಿ ಎಂದು ಘೊಷಣೆ ಮಾಡಿದ ಎಚ್.ಡಿ.ಕುಮಾರಸ್ವಾಮಿ ಒಂದು ದಿನ ಬಂದು ಸಮಾವೇಶ ಹಾಗೂ ರೋಡ್ ಶೋ ಮಾಡಿ ಹೋಗಿದ್ದನ್ನು ಹೊರತುಪಡಿಸಿ ಮರಳಿ ಕ್ಷೇತ್ರಕ್ಕೆ ಬಂದಿಲ್ಲ. ಹಾನಗಲ್ಗಿಂತ ಸಿಂದಗಿ ಕ್ಷೇತ್ರದತ್ತಲೇ ಜೆಡಿಎಸ್ ಮುಖಂಡರು ಹೆಚ್ಚು ಮುಖಮಾಡಿದರು. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಯುದ್ಧಕ್ಕೂ ಮೊದಲೇ ಮಂಕಾದಂತೆ ಕಾಣುತ್ತಿದೆ. ಕೆಆರ್ಎಸ್ ಪಕ್ಷ ಗ್ರಾಮೀಣ ಭಾಗಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಬೆಂಬಲಿಸಿ. ನಮ್ಮ ಅಭ್ಯರ್ಥಿಗೆ ಒಂದು ನೋಟು, ಒಂದು ವೋಟು ಎಂದು ಮತಬೇಟೆ ಆರಂಭಿಸಿದೆ.
ಯಡಿಯೂರಪ್ಪ ಪ್ರಭಾವ ಜೋರು: ಜಿಲ್ಲೆಯವರೇ ಸಿಎಂ ಇದ್ದರೂ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಭಾವ ಜೋರಾಗಿದೆ. ಹೀಗಾಗಿ ಅವರು ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಪ್ರಚಾರಕ್ಕೆ ಬಂದು ಹೋದ ಬಳಿಕ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಸಿಕ್ಕಿದೆ. ಸಿ.ಎಂ.ಉದಾಸಿ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯ ಹಾಗೂ ಅವುಗಳನ್ನು ಪಟ್ಟು ಹಿಡಿದು ಉದಾಸಿ ಹೇಗೆ ಮಾಡಿಸಿಕೊಳ್ಳುತ್ತಿದ್ದರು ಎಂಬುದನ್ನು ಮತದಾರರಿಗೆ ತಿಳಿಸಿ ಹೋಗಿದ್ದಾರೆ.