ಮುದ್ದೇಬಿಹಾಳದಲ್ಲಿ ಅಮರಶಿಲ್ಪಿ ಜಕಣಾಚಾರ್ಯರ ಸ್ಮರಣೋತ್ಸವವನ್ನು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಉದ್ಘಾಟಿಸಿದರು. ಜಗನ್ನಾಥ ಸ್ವಾಮೀಜಿ, ನಾಗಮೂರ್ತೇಂದ್ರ ಸ್ವಾಮೀಜಿ, ಸುಭಾಷ ಪತ್ತಾರ, ಈರಣ್ಣ ಬಡಿಗೇರ, ವಿ.ಎಸ್. ಲಮಾಣಿ, ಪ್ರಮೋದ ಬಡಿಗೇರ, ಮೌನೇಶ ಬಡಿಗೇರ, ಬಸವರಾಜ ಬಡಿಗೇರ ಮತ್ತಿತರರು ಇದ್ದಾರೆ. 
ಜಿಲ್ಲೆ

ಚುನಾವಣೆಯಲ್ಲಿ ಜಾತಿ ವ್ಯವಸ್ಥೆ ಸರಿಯಲ್ಲ

ಮುದ್ದೇಬಿಹಾಳ: ಸಮಾಜದಲ್ಲಿ ಕೆಲವು ಕೆಟ್ಟ ಹುಳಗಳಿರುತ್ತವೆ. ನಾವು ಬೇಡ ಅಂದ್ರೂ ಬಂದು ಕಚ್ಚುತ್ತವೆ. ಅಂಥ ಹುಳಗಳನ್ನು ನಿರ್ಲಕ್ಷೃ ಮಾಡಿ ಸಮಾಜದಿಂದ ದೂರವಿಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ಎಪಿಎಂಸಿಯಲ್ಲಿರುವ ದಿ. ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರ್ಯರ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚೆಗೆ ಜಾತಿಯತೆ ಹೆಚ್ಚಾಗತೊಡಗಿದೆ. ಎಲ್ಲದಕ್ಕೂ ಜಾತಿ ಅಡ್ಡ ತರುತ್ತಾರೆ. ಚುನಾವಣೆಯಲ್ಲಂತೂ ಜಾತಿ ವ್ಯವಸ್ಥೆ ವಾಕರಿಕೆ ತರಿಸುತ್ತದೆ. ಹಿಂದು ಸಮಾಜ ಒಗ್ಗಟ್ಟಾಗಿರಬೇಕು. ನೂರು ವರ್ಷಕ್ಕೊಮ್ಮೆ ಹುಟ್ಟುವ ಮಹಾನ್ ವ್ಯಕ್ತಿಯ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ಶ್ರೇಷ್ಠ ರಾಷ್ಟ್ರವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಮೋದಿಯಂತಹ ಸಮರ್ಥರನ್ನು ನಾವು ಕಳೆದುಕೊಳ್ಳಬಾರದು. ಎಲ್ಲರೂ ಸ್ವಾರ್ಥ ಬದಿಗಿಟ್ಟು ಸಮಾಜ, ದೇಶದ ಏಳಿಗೆಗೆ ಶ್ರಮಿಸಬೇಕು ಎಂದರು.

ಜಕಣಾಚಾರ್ಯ ಶ್ರೇಷ್ಠ ಶಿಲ್ಪಿಯಾಗಿದ್ದು ಅಮರಶಿಲ್ಪಿ ಎಂದು ಕರೆಯಿಸಿಕೊಂಡಿದ್ದಾರೆ. ಶಿಲ್ಪಕಲೆ ಇರುವವರೆಗೂ ಅವರ ಹೆಸರು ಅಮರ. ಈ ಸಮಾಜ ಒಂದಾಗಿರಬೇಕು. ಪ್ರೀತಿ, ಸಂತೋಷದಿಂದ ಜೀವಿಸಬೇಕು ಅನ್ನೋದು ಎಲ್ಲರ ಬಯಕೆ. ನೀರಿನ ಮೇಲಿನ ಗುಳ್ಳೆಯಂತಿರುವ ನಾವು ಇಲ್ಲಿ ಪರ್ಮನೆಂಟಾಗಿ ಗೂಟಾ ಹೊಡೆದು ಕೂಡಲು ಬಂದಿಲ್ಲ. ಇದನ್ನರಿತುಕೊಂಡು ಸಂಘಟಿತರಾಗಿ ನೆಮ್ಮದಿಯ ಬಾಳು ನಡೆಸಬೇಕು ಎಂದರು.

ಉಪನ್ಯಾಸಕ ವಿ.ಎಸ್. ಲಮಾಣಿ ಜಕಣಾಚಾರ್ಯರ ಕುರಿತು ಉಪನ್ಯಾಸ ನೀಡಿದರು. ಮುರನಾಳ ಮಳೇರಾಜೇಂದ್ರ ಸ್ವಾಮಿ ಮಠದ ಬ್ರಹ್ಮಶ್ರೀ ಜಗನ್ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಬಗೇರಿ ಸರಸ್ವತಿ ಪೀಠದ ನಾಗಮೂರ್ತೇಂದ್ರ ಸ್ವಾಮೀಜಿ, ಅಯ್ಯನಗುಡಿಯ ಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸುಭಾಷ ಪತ್ತಾರ, ನಿವೃತ್ತ ಸಾರಿಗೆ ಕಂಟ್ರೋಲರ್ ಈರಣ್ಣ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

ತಾಳಿಕೋಟೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಪಾಧ್ಯಕ್ಷ ಪ್ರಮೋದ ಬಡಿಗೇರ, ಮೌನೇಶ ಬಡಿಗೇರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಿರೀಶಗೌಡ ಪಾಟೀಲ ನಾಲತವಾಡ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸದಾಶಿವ ಮಾಗಿ, ಗಂಗಪ್ಪ ಬಡಿಗೇರ, ತಾಳಿಕೋಟೆ ವಿಶ್ವಕರ್ಮ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಜಗದೇವಿ ಪತ್ತಾರ, ಎಸ್.ಎಸ್. ಸಾಲಿಮಠ ಇತರರಿದ್ದರು.

ಗಾಯಕ ವಾಸುದೇವ ಬಡಿಗೇರ ಪ್ರಾರ್ಥಿಸಿದರು. ಶಿಕ್ಷಕ ಟಿ.ಡಿ. ಲಮಾಣಿ ನಿರೂಪಿಸಿದರು. ಪ್ರಭು ಪತ್ತಾರ ವಂದಿಸಿದರು.