ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಹೊಂಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರದಲ್ಲಿ ಕಸ್ತೂರಿ ಕರ್ನಾಟ ಜನಪರ ವೇದಿಕೆ ಕಾರ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಪಿಎಸ್‌ಐ ರವಿಕುಮಾರ್, ಇನಿಯತ್ ಕಾತೂನ್, ಮಾದೇಗೌಡ, ಚಾಂದ್‌ಪೀರ್, ಪರಿಮಳಾ, ಮಂಜುನಾಥ್, ಸುರೇಶ್ ಇದ್ದರು. 
ಜಿಲ್ಲೆ

ಜಾತಿ-ಧರ್ಮ ತಲೆಗಾಕಿಕೊಂಡು ಬಾಂಧವ್ಯದಿಂದ ದೂರ

ಮಳವಳ್ಳಿ: ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಸಾಮರಸ್ಯದ ಜೀವನ ನಡೆಸುವ ನಾವು ವಯಸ್ಕರಾಗುತ್ತಿದ್ದಂತೆ ಜಾತಿ, ಧರ್ಮವೆಂಬ ಇಲ್ಲಸಲ್ಲದ ವಿಷಯಗಳನ್ನು ತಲೆಗೇರಿಸಿಕೊಂಡು ಉತ್ತಮ ಬಾಂಧವ್ಯಗಳಿಂದ ದೂರಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಪಿಎಸ್‌ಐ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕಿರುಗಾವಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಿರುಗಾವಲು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹೊಂಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ಬಗ್ಗೆ ಅರಿವು ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶತಮಾನಗಳಿಂದಲೂ ಮನುಕುಲದಲ್ಲಿರುವ ಮೇಲು ಕೀಳಿನ ತಾರತಮ್ಯ ಹೋಗಲಾಡಿಸಲು ಬಸವಣ್ಣ ಸೇರಿದಂತೆ ಹಲವಾರು ದಾರ್ಶನಿಕರು ಶ್ರಮಿಸಿದ್ದಾರೆ. ಪ್ರಸ್ತುತ ಸಂವಿಧಾನದಲ್ಲೂ ಸಮಾನತೆಗಾಗಿ ಕಾನೂನು ರೂಪಿತಗೊಂಡಿದ್ದರೂ ಸಮಾಜದಲ್ಲಿ ಭೇದ-ಭಾವದ ಪ್ರಕರಣಗಳು ಕಡಿಮೆಯಾಗದಿರುವುದು ನೋವಿನ ಸಂಗತಿ ಎಂದರು.

ಈ ಕೆಟ್ಟ ಬಿಡುಗು ಸಮಾಜದಲ್ಲಿ ಬದಲಾಗಬೇಕಾದರೆ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಿಗೆ ಸಮ ಸಮಾಜದ ಪರಿಕಲ್ಪನೆಯಲ್ಲಿ ಜೀವಿಸಿದ ದಾರ್ಶನಿಕರ ಹಾಗೂ ಸಂವಿಧಾನದಲ್ಲಿರುವ ಕಾನೂನಿನ ಕಟ್ಟಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದರು. ಆ ನಿಟ್ಟಿನಲ್ಲಿ ಹೊಂಬೆಳಕು ಚಾರಿಟಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಇಸ್ರೇಲ್ ನಂತಹ ಪುಟ್ಟ ರಾಷ್ಟ್ರದ ಜನರು ಜಾತಿಭೇದವಿಲ್ಲದೆ ಒಗ್ಗಟ್ಟಿನಿಂದ ಇರುವುದಕ್ಕೆ ಇಡೀ ವಿಶ್ವದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅದೇ ರೀತಿಯಲ್ಲಿ ನಮ್ಮ ದೇಶದ ಪ್ರತಿಯೊಬ್ಬರಲ್ಲೂ ನಾಡು, ನುಡಿಯ ಬಗ್ಗೆ ಅಭಿಮಾನ ಬೆಳೆದಿಕೊಳ್ಳುವುದರಿಂದ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹುನ್ನಾರ ನಡೆಸುವ ಪಟ್ಟಭದ್ರರ ಮಾತಿಗೆ ಕಿವಿಗೊಡದೇ ಸಮಾನತೆ ಸಾಮರಸ್ಯದ ಜೀವನ ನಡೆಸುವಂತೆ ಕರೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರಿಶಂಕರ್ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಸಂವಿಧಾನದ ಪುಟಗಳನ್ನು ಅಭ್ಯಾಸ ಮಾಡುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇನಿಯತ್ ಕಾತೂನ್, ಉಪಾಧ್ಯಕ್ಷ ಮಾದೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಾಂದ್‌ಪೀರ್, ಮುಖ್ಯಶಿಕ್ಷಕಿ ಪರಿಮಳಾ, ಶಿಕ್ಷಕ ಕೃಷ್ಣೇಗೌಡ, ಟ್ರಸ್ಟ್‌ನ ಪದಾಧಿಕಾರಿಗಳಾದ ಮಂಜುನಾಥ್, ಸುರೇಶ್, ಪ್ರಸನ್ನಕುಮಾರ್, ಶ್ರೀನಿವಾಸ್ ಇದ್ದರು.