ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯು ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಅವರಿಗೆ ಸ್ಪಷ್ಟ ದತ್ತಾಂಶ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಚರ್ಚಿಸಲು ದಲಿತಪರ, ಪ್ರಗತಿ ಸಂಘಟನೆಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿಗಳನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ನಡೆಸುತ್ತಿದೆ. ಹಾಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ನೊಂದಿಗೆ ಅವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟ ದತ್ತಾಂಶ ನೀಡಬೇಕು ಎಂದು ತಿಳಿಸಿದರು. ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸೇರಿದಂತೆ ಉಪಜಾತಿಗಳ ವೈಜ್ಞಾನಿಕ ಮಾಹಿತಿ ತಿಳಿಯಬೇಕಿದೆ. 101 ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕೊಡುವಾಗ ನಿರ್ದಿಷ್ಟ ಅಂಕಿ ಅಂಶಗಳು ಬೇಕಾಗುತ್ತವೆ ಎಂದರು.
ಮೂರು ಹಂತದಲ್ಲಿ ವೈಜ್ಞಾನಿಕ ಸಮೀಕ್ಷೆ: ಗಣತಿದಾರರು 17 ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಜಿಲ್ಲೆಯಲ್ಲಿ ಸಮೀಕ್ಷೆಗಾಗಿಯೇ 1141 ಶಿಕ್ಷಕರನ್ನು ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರುತ್ತಾರೆ. ಎಲ್ಲ ಗಣತಿದಾರರಿಗೆ ತರಬೇತಿಯನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರಗಳಲ್ಲಿ ಮತಗಟ್ಟೆವಾರು ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಸೇರಿಸಬಹುದು. ಮೂರನೇ ಹಂತದಲ್ಲಿ ಮೇ 19 ರಿಂದ 22 ರವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ: ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಾಗುವುದು. ಗಣತಿದಾರರು ಬೆಳಗ್ಗೆ 6:30 ರಿಂದ ಸಂಜೆ 6:30 ರವರೆಗೆ ಸಮೀಕ್ಷೆ ನಡೆಸುವರು. ಆ ಸಂದರ್ಭದಲ್ಲಿ ಮಾತ್ರ ಮೊಬೈಲ್ ಆ್ಯಪ್‌ಗೆ ಲಾಗಿನ್ ಸಿಗಲಿದೆ. ಆದ್ದರಿಂದ ದತ್ತಾಂಶ ಸಂಗ್ರಹ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲರೂ ಪೂರ್ಣವಾಗಿ ತೊಡಗಿಸಿಕೊಂಡು ಗಣತಿದಾರರು ಕೇಳುವಂತಹ ದತ್ತಾಂಶಕ್ಕೆ ಸ್ಪಷ್ಟ ಮಾಹಿತಿ ಕೊಡಿ. ಸಮೀಕ್ಷೆಯಲ್ಲಿ ಸಂಘಟನೆಗಳ ಪಾತ್ರ ಬಹಳ ಮುಖ್ಯವಾಗಿದ್ದು, ಆಯಾ ಪ್ರಾಂತ್ಯದ, ವಾರ್ಡ್‌ಗಳಲ್ಲಿ ಪ.ಜಾತಿ ಜನರಿಗೆ ಸಮೀಕ್ಷೆ ಬಗ್ಗೆ ವಿವರಿಸಿ ಗಣತಿದಾರರು ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಸಮೀಕ್ಷೆಗೆ ಸ್ಪಷ್ಟ ಮಾಹಿತಿ ನೀಡಲು ಸಂಘಟನೆಗಳ ಮುಖಂಡರು ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದರು.
ಗೊಂದಲಗಳಿಗೆ ಕಿವಿ ಕೊಡಬೇಡಿ: ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಮಾತನಾಡಿ, ಸಮೀಕ್ಷೆಯಲ್ಲಿ ಮನೆ, ಕಾರು, ಬೈಕ್, ಜಮೀನು, ಉದ್ಯೋಗದ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಸಿಗುವ ಸೌಲಭ್ಯ ನಿಲ್ಲಿಸುತ್ತಾರೆ ಎನ್ನುವ ತಪ್ಪು ತಿಳುವಳಿಕೆ ಇದೆ. ಸಮೀಕ್ಷೆಗೆ ಮಾಹಿತಿ ನೀಡುವುದರಿಂದ ಯಾವುದೇ ಸೌಲಭ್ಯ ಕಡಿತಗೊಳಿಸುವುದಿಲ್ಲ. ಹಾಗಾಗಿ ಯಾವುದೇ ಗೊಂದಲಕ್ಕೆ ಈಡಾಗದೆ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಿ ಎಂದರು. ಈ ಒಳ ಮೀಸಲಾತಿ ಸಮೀಕ್ಷೆಯು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅಭಿವೃದ್ಧಿಗೆ ಮುನ್ನುಡಿ ಆಗಿದ್ದು, ಇದೊಂದು ಮಹತ್ವದ್ದಾಗಿದ್ದು, ಜಿಲ್ಲೆಯ ನಾಲ್ಕು ತಾಲೂಕಿನ ಸಾರ್ವಜನಿಕರು, ಮುಖಂಡರು, ಸಂಘಟನೆಗಳು ಸಹಕಾರ ನೀಡಿ ಸಮೀಕ್ಷೆಯನ್ನು ಯಶಸ್ಸ್ವಿಗೊಳಿಸಬೇಕು ಎಂದರು.
ಸಹಾಯವಾಣಿ ಸಂಪರ್ಕಿಸಿ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ರಾಜ್ಯ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಸಹಾಯವಾಣಿ 9482300400 ಹಾಗೂ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವಿಚಾರಣಾ ಆಯೋಗ ಸಹಾಯವಾಣಿ 9481359000 ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.