ಜಿಲ್ಲೆ

ಜಾತಿ ಸಂಘರ್ಷಕ್ಕೆ ವಿಚಾರ ಮಾಡಿ ಕೈ ಹಾಕಬೇಕು; ಸಚಿವ ಶಿವಾನಂದ ಪಾಟೀಲ

ವಿಜಯಪುರ: ಜಾತಿ ವ್ಯವಸ್ಥೆ ಈ ದೇಶವನ್ನು ಸುಭೀಕ್ಷೆಯಿಂದ ಬದಕಲು ಬಿಡುತ್ತಿಲ್ಲ. ಈ ಜಾತಿ ಸಂಕೀರ್ಣದಿಂದ ಹೊರಬರಬೇಕೆಂಬುದು ನಮ್ಮ ಪೂರ್ವಜರ ಆಶೆಯಾಗಿತ್ತು. ಈ ಗೊಂದಲ 50 ವರ್ಷಕ್ಕೆ ಮುಗಿಯುತ್ತದೆ ಎಂಬ ನಿರೀಕ್ಷೆಯಿತ್ತು. ದುದೈವಶಾತ್ 75 ವರ್ಷವಾದರೂ ಮುಗಿದಿಲ್ಲ. ಹೀಗಾಗಿ ಜಾತಿ ಸಂಘರ್ಷಕ್ಕೆ ನಮ್ಮ ಸರ್ಕಾರಗಳು ವಿಚಾರ ಮಾಡಿ ಕೈ ಹಾಕಬೇಕು ಎಂದು ಜವಳಿ, ಸಕ್ಕರೆ ಮತ್ತು ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಂಪುಟ ಸಭೆಯಲ್ಲಿ ನಡೆದಿದೆ ಎನ್ನಲಾದ ವಾಗ್ವಾದ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಾಗ್ವಾದ ಅಲ್ಲ. ಸರ್ಕಾರ ಯಾವುದೇ ನಿಲುವು ತೆಗೆದುಕೊಳ್ಳಬೇಕಾದರೆ ಹಿಂದಿನ ವಿಚಾರ ಮೆಲಕು ಹಾಕೋದು ಸ್ವಾಭಾವಿಕ. ಆ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತರಬೇಕಾಯಿತು. ಸಿಎಂ ಕೂಡ ತಮ್ಮ ಅಭಿಪ್ರಾಯ ಹೇಳಿದ್ದರಲ್ಲಿ ತಪ್ಪೇನಿದೆ? ಅವರು ಬುದ್ದಿವಾದ ಹೇಳಬಾರದೆ?. ಅಷ್ಟಕ್ಕೂ ಅದು ಪಕ್ಷದ ಆಂತರಿಕ ವಿಚಾರ. ಮಾಧ್ಯಮಗಳಿಗೆ ಹೇಳಿದವರು ಯಾರು? ಎಂದರು.

2013ರಲ್ಲಿ 122 ಜನ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2018ರಲ್ಲಿ 82ಕ್ಕೆ ಬಂದೆವು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಿಂದಲೇ ಹಾಗಾಯಿತು ಅಂತಲ್ಲ. ಬೇರೆ ಬೇರೆ ಜಾತಿಗಳ ಆಂತರಿಕ ವಿಚಾರವೂ ಇತ್ತು. ಮೀಸಲಾತಿ ವಿಚಾರಗಳೂ ಇದ್ದವು. 2013-18ರವರೆಗೆ ಇತಿಹಾಸದಲ್ಲಿಯೇ ಕೊಡದ ಭಾಗ್ಯ ಕೊಟ್ಟರೂ ಕಾಂಗ್ರೆಸ್ ಸೋತಿದೆ. ಹೀಗಾಗಿ ಜಾತಿ ಸಂಘರ್ಷಕ್ಕೆ ನಮ್ಮ ಸರ್ಕಾರಗಳು ಬಹಳ ವಿಚಾರ ಮಾಡಿ ಕೈಹಾಕಬೇಕು ಎಂದರು.

ಜಾತಿ ಜನಗಣತಿ ಬೇಕಾ ಬೇಡವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಾತಿ ಜನಗಣತಿಯಿಂದ ಒಳ್ಳೆಯದಾಗುತ್ತಿದ್ದರೆ? ಒಳ್ಳೆಯದೂ ಆಗಬಹುದು. ನಾವು ನಿರೀಕ್ಷೆ ಮಾಡೋದು ಒಳ್ಳೆಯದಾಗಲಿ ಎಂದು. ಇದರಿಂದ ಹಾನಿಯಾಗುತ್ತಿದ್ದರೆ ಪೂರ್ವಾಲೋಚನೆ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದೇನಷ್ಟೆ ಎಂದರು.

ಇನ್ನು ಸಿಇಟಿ ಪರೀಕ್ಷೆ ಸಂದರ್ಭ ಜನಿವಾರ ತೆಗೆಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಜನಿವಾರ ತೆಗೆಯಿಸಿದ್ದು ಯಾರೇ ಮಾಡಿದರೂ ತಪ್ಪು. ಸರ್ಕಾರ ಅಂಥ ಯಾವುದೇ ಆದೇಶ ಮಾಡಿಲ್ಲ. ಮಾಡೋದೂ ಇಲ್ಲ. ಅದು ಯಾವುದೇ ಸರ್ಕಾರ ಇರಬಹುದು. ಹಾಗೆ ಮಾಡಲ್ಲ. ಬಹಳ ತಿಳುವಳಿಕೆ ಇಲ್ಲದ ಅಧಿಕಾರಿ ಮಾಡಿದ ತಪ್ಪಿಗೆ ಸಮಾಜ ತಲೆ ತಗ್ಗಿಸುವಂತಾಗಿದೆ. ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ. ಆ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಉನ್ನತ ಶಿಕ್ಷಣ ಸಚಿವರು ಸಹ ಹೇಳಿದ್ದಾರೆ. ಯಾವುದೇ ಜಾತಿಯವರಿಗೂ ಹಾಗೆ ಮಾಡಬಾರದು ಎಂದರು.