ಲಿಂಗಸುಗೂರು: ಎಸ್ಸಿ ಒಳಮೀಸಲಾತಿ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಹಿಂದು ಲಂಬಾಣಿ ಬದಲು ಆದಿ ಆಂಧ್ರ ಎಂದು ತಪ್ಪಾಗಿ ನಮೂದಿಸಿದ್ದರಿಂದ ಗಣತಿದಾರ ಶಿಕ್ಷಕನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ನಾಗಲಾಪುರ ಗ್ರಾಪಂ ವ್ಯಾಪ್ತಿಯ ಹೆಗ್ಗಾಪುರ ತಾಂಡಾದಲ್ಲಿ ಜಾತಿ ಗಣತಿಗೆ ನಿಯೋಜಿಸಿದ್ದ ಶಿಕ್ಷಕ ಸೋಮಪ್ಪ ಅಮಾನತುಗೊಂಡಿದ್ದಾರೆ. ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರ ವಿಚಾರಣಾ ಆಯೋಗದಿಂದ ಒಳಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶ ಶೇಖರಿಸಲು ಮೇ 5 ರಿಂದ 23 ರವರೆಗೆ ಜಾತಿಗಣತಿ ಹಮ್ಮಿಕೊಳ್ಳಲಾಗಿದೆ.
ಹೆಗ್ಗಾಪುರ ತಾಂಡಾದಲ್ಲಿ ಶಿಕ್ಷಕ ಸೋಮಪ್ಪ ಮೊಬೈಲ್ ಆ್ಯಪ್‌ನಲ್ಲಿ ಪರಿಶಿಷ್ಟ ಜಾತಿ ಕುಟುಂಬದವರ ಮಾಹಿತಿ ಭರ್ತಿ ಮಾಡುವ ವೇಳೆ ಲಂಬಾಣಿ ಜಾತಿಯ ಕೋಡ್ ನಂ.017.2 ಎಂದು ಆಯ್ಕೆ ಮಾಡುವ ಬದಲು ಕೋಡ್ ನಂ.001 ಆದಿ ಆಂಧ್ರ ಎಂದು ತಪ್ಪಾಗಿ ಆಯ್ಕೆ ಮಾಡಿ 50 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10 (1)(ಡಿ) ರನ್ವಯ ಶಿಕ್ಷಕ ಸೋಮಪ್ಪ ವಿರುದ್ಧ ಮಾಡಲಾದ ಆರೋಪಗಳ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಡಿಸಿ ಕೆ.ನಿತೀಶ್ ತಿಳಿಸಿದ್ದಾರೆ.