ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸುವುದಕ್ಕಾಗಿ ಜಾತಿಗಣತಿ ಸಮೀಕ್ಷೆ ನಡೆಸುವುದು ಅಗತ್ಯವಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಸರಸ್ವತಿಪುರಂನ ಗಾಣಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಡಿಮೆ ಜನಸಂಖ್ಯೆಯ ಜಾತಿ, ಸಣ್ಣ ಸಣ್ಣ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲು ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು ಎಂದರು.
ಕಡಿಮೆ ಜನಸಂಖ್ಯೆಯ ಸಣ್ಣ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಸಿಗದೆ ಅವರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಹಾಗೆಂದು ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಂವಿಧಾನದ ಮಿತಿಯೂ ಇದೆ. ಇದನ್ನೆಲ್ಲವನ್ನೂ ಗಮನಿಸಿ ಜನಸಂಖ್ಯೆ ಆಧಾರಿತ ಮೀಸಲಾತಿ ಬಗ್ಗೆ ಚಿಂತನೆ ನಡೆದಿದೆ. ಹಿಂದುಳಿದ ಸಮುದಾಯಗಳು ಪ್ರತ್ಯೇಕವಾಗಿದ್ದರೆ ದುರ್ಬಲಗೊಳ್ಳುತ್ತವೆ. ಒಗ್ಗಟ್ಟು, ಬಲವರ್ಧನೆ ಮಾಡಿದರೆ ರಾಜಕೀಯವೂ ಸೇರಿದಂತೆ ಇತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಈ ಸಮುದಾಯಗಳವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಗಾಣಿಗ ಸಮುದಾಯ ರಾಜಕೀಯವಾಗಿ ಮುಂದೆ ಬರಬೇಕು. ಸಣ್ಣ ಸಣ್ಣ ಸಮುದಾಯಗಳಿಗೆ ವಿಧಾನಸಭೆಯಲ್ಲಿ ಅವಕಾಶ ಸಿಗುವುದು ಕಡಿಮೆಯಾಗಿರುವ ಕಾರಣ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಇದೇ ವೇಳೆ ಸಮುದಾಯದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಾಣಿಗ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಶ್ರಮಿಸಿದ ಎನ್.ಸಿ.ಉಮೇಶ್, ಯದುಕುಮಾರ್, ದ್ವಾರಕಾನಾಥ ಅವರನ್ನು ಅಭಿನಂದಿಸಲಾಯಿತು.
ಶಾಸಕ ಜಿ.ಡಿ.ಹರೀಶ್‌ಗೌಡ, ಮೈಲ್ಯಾಕ್ ಮಾಜಿ ಅಧ್ಯಕ್ಷ ಆರ್.ರಘು ಕೌಟಿಲ್ಯ, ಮಾಜಿ ಮೇಯರ್ ಅನಂತು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮು, ಕಾಂಗ್ರೆಸ್ ಮುಖಂಡ ಪ್ರದೀಪ್‌ಕುಮಾರ್, ಮುಖಂಡರಾದ ಅಶೋಕ್‌ಕುಮಾರ್, ರಾಮಸ್ವಾಮಿ, ಎಂ.ಎಲ್.ವರದರಾಜು, ಚೇತನ್, ಎಂ.ಕೆ.ಚನ್ನಕೇಶವ, ಅರವಿಂದ, ಪಾರ್ಥಸಾರಥಿ ಇತರರಿದ್ದರು.