ಜಿಲ್ಲೆ

ಜಿಬಿಎ ವ್ಯಾಪ್ತಿಯಲ್ಲಿ ಜಾತಿ ಗಣತಿ ನಿಧಾನ

ಆರ್.ತುಳಸಿಕುಮಾರ್

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದರೂ, ರಾಜಧಾನಿಯಲ್ಲಿ ಗಣತಿ ನಿಧಾನಗೊಂಡಿದೆ. ಅಪಾರ್ಟ್‌ಮೆಂಟ್‌ಗಳಿಗೆ ತೆರಲಿ ಮಾಹಿತಿ ಸಂಗ್ರಹ ಸೇರಿ ವಿವಿಧ ಕಾರಣಗಳಿಂದ ಸಮೀಕ್ಷೆ ವಿಳಂಬವಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ 40 ಲಕ್ಷ ಮನೆಗಳಿವೆ. ಇಷ್ಟು ಬೃಹತ್ ಸಂಖ್ಯೆ ಮನೆಗಳನ್ನು ಸಮೀಕ್ಷೆ ಮಾಡಲು ಶಿಕ್ಷಕರು ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಈವರೆಗೆ 13.16 ಲಕ್ಷ ಮನೆಗಳನ್ನು ಮಾತ್ರ ಸಮೀಕ್ಷೆ ನಡೆಸಲು ಸಾಧ್ಯವಾಗಿದ್ದು, ಗಡುವಿನೊಳಗೆ ಮುಕ್ತಾಯಗೊಳಿಸುವುದು ಅನುಮಾನವಾಗಿದೆ. ಈ ಸಂಗತಿ ಉಸ್ತುವಾರಿ ಅಧಿಕಾರಿಗಳಿಗೆ ಅರಿವಿಗೆ ಬಂದಿದ್ದು, ಹಿಂದುಳಿದ ವರ್ಗಗಳ ಆಯೋಗ ಹಾಗೂ ಸರ್ಕಾರಕ್ಕೆ ಮಾಹಿತಿ ರವಾನಿಸಿ ಇನ್ನಷ್ಟು ದಿನಗಳ ಕಾಲ ಸಮಯಾವಕಾಶ ಕೋರಲು ಚಿಂತನೆ ನಡೆಸಲಾಗಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

ಮಹಾನಗರದಲ್ಲಿರುವ ಹೆಚ್ಚಿನ ಜನರು ಉದ್ಯೋಗಸ್ಥರಾಗಿದ್ದು, ಬೆಳಗ್ಗೆ ಮನೆಯಿಂದ ಹೊರಟರೆ ಹಿಂದಿರುಗಲು ರಾತ್ರಿ ಆಗಿರುತ್ತದೆ. ಮನೆಯಿಂದ ಕೆಲಸದ ಸ್ಥಳ ದೂರ ಇರುವುದರಿಂದ ಸಂಚಾರ ಸಿಕ್ಕುವಿನಲ್ಲಿ ಹೋಗಿಬರಲು ಒಂದೆರಡು ಗಂಟೆಗಳು ಹಿಡಿಯುತ್ತಿದೆ. ಹಾಗಾಗಿ ಪತಿ-ಪತ್ನಿ ಸೇರಿ ಕಡಿಮೆ ಸದಸ್ಯರುಳ್ಳ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಲು ನಿಧಾನವಾಗುತ್ತಿದೆ. ನೆರೆಮನೆಯವರಿಂದ ಮಾಹಿತಿ ಪಡೆಯಲು ಅವಕಾಶ ಇಲ್ಲದ ಕಾರಣ ಖುದ್ದು ಕುಟುಂಬಸ್ತರೇ ಗಣತಿದಾರರಿಗೆ ವಿವರಗಳನ್ನು ನೀಡಬೇಕಿದೆ. ಹಾಗಾಗಿ ಸರ್ವೆದಾರರು ಕೂಡ 2-3 ಬಾರಿ ಅಂತಹ ಮನೆಗಳಿಗೆ ಕದ ತಟ್ಟಿ ವಾಪಸ್ ಬರುವಂತಾಗಿದೆ ಎಂಬುದಾಗಿ ಸಮೀಕ್ಷೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಿನ್ನೆ 1.19 ಲಕ್ಷ ಮನೆಗಳ ಸಮೀಕ್ಷೆ

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿನ ಪ್ರದೇಶಗಳಲ್ಲಿ ಕಳೆದ ಹತ್ತು ದಿನಗಳಲ್ಲಿ 13.16 ಲಕ್ಷ ಮನೆಗಳು ಸಮೀಕ್ಷೆಗೆ ಒಳಪಟ್ಟಿವೆ. ಸೋಮವಾರ 1.19 ಲಕ್ಷ ಮನೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸದ್ಯ ಪಶ್ಚಿಮ ಪಾಲಿಕೆ ಹಾಗೂ ಉತ್ತರ ಪಾಲಿಕೆಗಳಲ್‌ಇ ಹೆಚ್ಚಿನ ಮನೆಗಳನ್ನು ಸರ್ವೆ ಮಾಡಲಾಗಿದೆ.

ಪಾಲಿಕೆವಾರು ಸಮೀಕ್ಷೆ ನಡೆಸಿದ ಮನೆಗಳ ವಿವರ:

ಕೇಂದ್ರ ಪಾಲಿಕೆ 1,71,075

ಪೂರ್ವ ಪಾಲಿಕೆ 1,96,299

ಉತ್ತರ ಪಾಲಿಕೆ 3,20,931

ದಕ್ಷಿಣ ಪಾಲಿಕೆ 2,34,893

ಪಶ್ಚಿಮ ಪಾಲಿಕೆ 3,92,985