ಜಿಲ್ಲೆ

ಜಾತಿಗಣತಿ ಜನಾಭಿಪ್ರಾಯಪಡೆಯಬೇಕು - ಡಾ.ಸಿ.ಎನ್. ಮಂಜುನಾಥ್

ಗಂಗಾಧರ ಬಿ ವಿ

ರಾಮನಗರ: ಸಂವಿಧಾನದ ಮೂಲಕವೇ ಈ ದೇಶದ ಪ್ರತಿಯೊಬ್ಬ ನಾಗರೀಕನಿಗೆ ಗೌರವಯುತ ಬದುಕನ್ನು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್, ಅವರು ಸದಾಕಾಲ ಅನಕರಣೀಯರು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ರಾಮನಗರದ ಸಂಸದರ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕ ಅಂಬೇಡ್ಕರ್ ಅವರು.

ಕೆಲವರು ರಾಜಕೀಯ ಲಾಭಕ್ಕಾಗಿ ಸಂವಿಧಾನ ಬದಲಾವಣೆಯ ಗಾಳಿ ಸುದ್ದಿಯನ್ನು ಹರಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಎಂದಿಗೂ ಸಂವಿಧಾನ ಬದಲಾವಣೆಯಂತಹ ಕೆಲಸವನ್ನು ಮಾಡುವುದಿಲ್ಲ. ದೇಶದ ಜನತೆ ಸಂವಿಧಾನ ಬದಲಾವಣೆಯ ಗಾಳಿ ಸುದ್ದಿಗೆ ಕಿವಿಗೊಡಬಾರದು. ಸಂವಿಧಾನವನ್ನು ಯಾರು ಬದಲಾವಣೆ ಮಾಡಲು ಹೋಗುವುದಿಲ್ಲ, ಅದು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಬಿಜೆಪಿ ಮುಖಂಡರಾದ ಗೌತಮ್ ಗೌಡ, ದಿಶಾ ಸಮಿತಿ ಸದಸ್ಯರಾದ ನರಸಿಂಹ ಮೂರ್ತಿ, ರಾಜೇಶ್ ಮುಂತಾದವರು ಇದ್ದರು.

ಜನಾಭಿಪ್ರಾಯ ಪಡೆಯಬೇಕು

ಜಾತಿ ಗಣತಿಯನ್ನು ಜನಾಭಿಪ್ರಾಯಕ್ಕೆ ಬಿಡಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ದೇಶದಲ್ಲಿ ಜಾತಿ ಭಿನ್ನಾಭಿಪ್ರಾಯ ಇರಬಾರದು ಎಂದು ಹೇಳಿದ್ದರು. ಸಂವಿಧಾನ ಕೂಡಾ ಅದನ್ನೇ ಹೇಳುತ್ತಿದೆ. ಹೀಗಿರುವಾಗಿ ಜಾತಿಗಣತಿ ಯಾಕೆ ಎಂಬುದು ಗೊತ್ತಿಲ್ಲ. ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ. ಜಾತಿಗಣತಿಗೆ ಯಾವುದೇ ಮಹತ್ವವಿಲ್ಲ. ಸಾಮಾಜಿಕ, ಶೈಕ್ಷಣಿಕವಾಗಿ ಬಂದ ಗಣತಿಯನ್ನ ಜಾತಿಗೆ ಹೋಲಿಕೆ ಮಾಡಬಾರದು ಎಂದರು.

ಸಂವಿಧಾನ ಎಲ್ಲ ಜಾತಿ ಒಂದೇ ಎಂದು ಹೇಳುವಾಗ ಜಾತಿಗಣತಿ ಯಾಕೆ ಬೇಕು. ಇದರಿಂದ ಜಾತಿಗಳ ನಡುವೆ ವೈಮನಸ್ಸು, ಕಂದಕಗಳು ಮತ್ತಷ್ಟು ಜಾಸ್ತಿ ಆಗುತ್ತದೆ. ಎಲ್ಲಾ ಜಾತಿಗಳಲ್ಲೂ ಬಡವರು ಇದ್ದಾರೆ. ಜಾತಿಗಣತಿ ವಿಧಾನಸಭೆ, ವಿಧಾನಪರಿಷತ್ ನಲ್ಲಿ ಚರ್ಚೆ ಆಗಬೇಕು, ಸಾಮಾಜಿಕ ಕಳಕಳಿ, ತಜ್ಞರ ಜೊತೆ ಚರ್ಚೆ ಆಗಬೇಕು. ವಿಧಾನಸಭೆ ಇದಕ್ಕಾಗಿ ಸಮಿತಿ ರಚನೆ ಮಾಡಬೇಕು. ಆತುರದಲ್ಲಿ ಯಾವುದೇ ನಿರ್ಧಾರ ಸರಿ ಎಂದು ಮಂಜುನಾಥ್ ಹೇಳಿದರು.