ಮೈಸೂರು: ಹಿಂದುಳಿದ ವರ್ಗಗಳ ಆಯೋಗ ಇದುವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ)ಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಒಂದುವೇಳೆ ವರದಿಯನ್ನು ಸಲ್ಲಿಸಿದರೆ ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆಗೆ ಆಯೋಗದ ಅಧ್ಯಕ್ಷರು ಸಮಯ ಕೇಳಿದರೆ ಸಮಯ ಕೊಡುತ್ತೇನೆ. ಆಯೋಗ ನೀಡುವ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಆದರೆ, ವರದಿಯನ್ನು ಅಂಗೀಕಾರ ಮಾಡಬೇಕೋ ಅಥವಾ ಬಿಡಬೇಕೋ ಎಂಬುದು ನಂತರದ ವಿಚಾರ. ವರದಿಯಲ್ಲಿ ಏನಿದೆ ಎಂಬ ವಿಚಾರ ಯಾರಿಗೂ ಗೊತ್ತಿಲ್ಲ. ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳದೆ ವರದಿ ಅವೈಜ್ಞಾನಿಕ ಎಂದು ಹೇಳಲು ಹೇಗೆ ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.