ವಿಜಯಪುರ: ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಜನಗಣತಿ ವರದಿ ಜಾರಿಗೆ ಶೋಷಿತ ಸಮುದಾಯಗಳು ಒಕ್ಕೋರಲಿನಿಂದ ಆಗ್ರಹಿಸಿವೆ.
ಇಲ್ಲಿನ ಖಾಸಗಿ ಹೊಟೇಲ್‌ವೊಂದರಲ್ಲಿ ಶನಿವಾರ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಭೆ ಸೇರಿ ಒಮ್ಮತ ನಿರ್ಣಯ ಕೈಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ನಿರ್ಣಯಗಳನ್ನು ಮಂಡಿಸಿದರು.
ಹಿಂದುಳಿದ ವರ್ಗಗಳ ಆಯೋಗದಿಂದ 185 ಕೋಟಿ ವೆಚ್ಚ ಮಾಡಿ ಜಾತಿ ಜನಗಣತಿ ವರದಿ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಒತ್ತಡಕ್ಕೆ ಮಣಿಯದೇ ವರದಿ ಜಾರಿಗೊಳಿಸಬೇಕು. ಇದು ಸಿದ್ದರಾಮಯ್ಯ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯನವರೇ ಕಾಂತರಾಜು ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಬೇಕು ಎಂದು ಒತ್ತಾಯಿಸಿದರು.
ಕೆಲವರು ವರದಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ. ಅದರಲ್ಲೂ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಶಾಸಕರು ಮತ್ತು ಸಚಿವರು ಕಾಂತರಾಜು ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡೆ ಖಂಡನೀಯ. ಶೋಷಿತ ಸಮುದಾಯಗಳಿಂದಲೇ ಆಯ್ಕೆಯಾದ ನಾಯಕರುಗಳು ಇದೀಗ ಆ ಸಮುದಾಯಗಳಿಗೆ ಅನ್ಯಾಯ ಮಾಡಲು ಹೊರಟಿರುವುದು ಯಾವ ನ್ಯಾಯ? ಈ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಟಸ್ಥವಾಗಿರಬೇಕು. ಇಲ್ಲವೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ರೂಪಿಸಲು ಮುಂದಾಗಿವೆ. ಹಂತ ಹಂತವಾಗಿ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸುವ ಕುರಿತು ಚರ್ಚಿಸಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನಾಯಕರು ಒಗ್ಗಟ್ಟಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು. ಹಾಗೊಂದು ವೇಳೆ ಸಿಎಂ ಒಪ್ಪದೇ ಇದ್ದಲ್ಲಿ ರಾಜ್ಯಾದ್ಯಂತ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗುವುದು ಎಂದು ಮುಖಂಡರುಗಳು ಒಮ್ಮತದಿಂದ ತಿಳಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾತಿ ಜನಗಣತಿ ವರದಿ ಪರವಾಗಿದ್ದಾರೆ. ಹೀಗಾಗಿ ವಿರೋಧ ವ್ಯಕ್ತಪಡಿಸುವವರು ರಾಹುಲ್ ಗಾಂಧಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದಂತಾಗುತ್ತದೆ. ರಾಜ್ಯದ ಶೇ. 70 ರಷ್ಟು ಜನ ವರದಿ ಪರವಾಗಿದ್ದಾರೆ. ಹೀಗಾಗಿ ಆ ಎಲ್ಲ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂದರು.
ಮಾಜಿ ಶಾಸಕರಾದ ರಾಜು ಆಲಗೂರ, ಶರಣಪ್ಪ ಸುಣಗಾರ, ದೇವಾನಂದ ಚವಾಣ್, ಮುಖಂಡರಾದ ಬಿ.ಡಿ. ಪಾಟೀಲ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಅಬ್ದುಲ್‌ಹಮೀದ್ ಮುಶ್ರೀಫ್, ಮಹ್ಮದ್ ರಫೀಕ ಟಪಾಲ್, ಜಕ್ಕಪ್ಪ ಯಡವೆ, ಬಿ.ಎಸ್. ಗಸ್ತಿ, ಮಾರುತಿ ಬಂಡಿ, ಶ್ರೀಶೈಲ ತಡಲಗಟ್ಟಿ, ಅಭಿಷೇಕ ಚಕ್ರವರ್ತಿ, ಎಂ.ಸಿ. ಮುಲ್ಲಾ, ಪ್ರಕಾಶ ಸೊನ್ನದ, ಎಂ.ಜಿ. ಯಂಕಂಚಿ, ಸಂಜು ಕಂಬಾಗಿ, ಅಡಿವೆಪ್ಪ ಸಾಲಗಲ್ಲ, ಮಲ್ಲು ಬಿದರಿ, ರಾಜಶೇಖರ ಯಡಹಳ್ಳಿ, ಎಂ.ಆರ್. ತಾಂಬೋಳಿ, ಗಣೇಶ ಕಬಾಡೆ, ಪ್ರಕಾಶ ನಾವಿ, ಫಯಾಜ್ ಕಲಾದಗಿ, ವಸಂತ ಹೊನಮೊಡೆ, ದಾನಪ್ಪ ಕಟ್ಟಿಮನಿ, ಶಿವಪುತ್ರಪ್ಪ ತಳಬಂಡಾರಿ, ಬೀರಪ್ಪ ಸಾಸನೂರ, ಕೃಷ್ಣ ಕಾಮಟೆ, ಸಾಹೇಬಗೌಡ ಬಿರಾದಾರ, ದಾದಾಪೀರ ಬಡಕಲ್, ಪರಶುರಾಮ ಹೊಸಮನಿ, ಮಹಾದೇವ ರಾವಜಿ, ದಯಾನಂದ ಲಚ್ಯಾಣ ಮತ್ತಿತರರಿದ್ದರು.