ಮೈಸೂರು: ಬ್ರಾಹ್ಮಣರಿಗೆ ಸರ್ಕಾರದ ಸವಲತ್ತು ಹಾಗೂ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವ ಉದ್ದೇಶದಿಂದ ಜಾತಿ ದೃಢೀಕರಣ ಪತ್ರ ನೀಡುವಂತೆ ಕಂದಾಯ ಇಲಾಖೆಗೆ ನಿರ್ದೇಶನ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಕೇಂದ್ರ ಸರ್ಕಾರ ಸಾಮಾನ್ಯ ವರ್ಗದವರಿಗೆ ಶೇ.10 ಮೀಸಲಾತಿ ನೀಡಿದೆ. ಅಲ್ಲದೆ ಬ್ರಾಹ್ಮಣರ ಅಭಿವೃದ್ಧಿ ನಿಗಮದಿಂದ ಬ್ರಾಹ್ಮಣರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ. ಈ ಸವಲತ್ತು ಪಡೆದುಕೊಳ್ಳಲು ಜಾತಿ ದೃಢೀಕರಣ ಪತ್ರ ಅತ್ಯವಶ್ಯಕ. ಆದರೆ ಕಂದಾಯ ಇಲಾಖೆಯಲ್ಲಿ ಬ್ರಾಹ್ಮಣರಿಗೆ ಜಾತಿ ದೃಢೀಕರಣ ಪತ್ರ ನೀಡಲು ಕಾನೂನು ಭಾಗದಲ್ಲಿ ಅವಕಾಶ ಇರಲಿಲ್ಲ. ಇದೀಗ ದೃಢೀಕರಣ ಪತ್ರ ನೀಡಲು ಆದೇಶಿಸಲಾಗಿದೆ ಎಂದರು.
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ ಬಡ ವರ್ಗದವರಿಗೆ ಅಕ್ರಮ-ಸಕ್ರಮ ಯೋಜನೆಯಲ್ಲಿ ಜಾಗ ಮಂಜೂರು ಮಾಡಲು ಆದೇಶಿಸಲಾಗಿದೆ. ಇನ್ನು ಆರು ತಿಂಗಳ ಒಳಗೆ ಈ ಸಂಬಂಧದ ಯಾವುದೇ ಅರ್ಜಿಗಳು ರಾಜ್ಯದಲ್ಲಿ ಉಳಿಯುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.