ಜಿಲ್ಲೆ

ನಗದು ರಹಿತವಾಗಿ ನೀರಿನ ಕರ ಪಾವತಿ ವ್ಯವಸ್ಥೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಗದು ರಹಿತವಾಗಿ ನೀರಿನ ಕರ ಪಾವತಿ ವ್ಯವಸ್ಥೆಗೆ ಶನಿವಾರ ಚಾಲನೆ ನೀಡಲಾಯಿತು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಯುಐಡಿಎಫ್​ಸಿ (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ) ವ್ಯವಸ್ಥಾಪಕ ನಿರ್ದೇಶಕ ಶರತ್ ಬಿ. ಈ ಸಂಬಂಧ 22 ಸ್ವೈಪಿಂಗ್ ಮಷಿನ್​ಗಳನ್ನು ಬಿಡುಗಡೆ ಮಾಡಿದರು.

ಸ್ವೈಪಿಂಗ್ ಮಷಿನ್​ಗಳಿಗೆ ನೀರು ಬಳಕೆದಾರರ ಆರ್.ಆರ್. ಸಂಖ್ಯೆಯನ್ನು ಇಂಟಿಗ್ರೇಟ್ ಮಾಡಲಾಗಿದೆ. ಅವಳಿ ನಗರದ ನೀರು ಬಳಕೆದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಾಗೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಬಳಸಿ ನಗದು ರಹಿತವಾಗಿ ನೀರಿನ ಕರ ಪಾವತಿಸಬಹುದು. ಪಾವತಿಸಿದ ತಕ್ಷಣ ತ್ವರಿತವಾಗಿ ರಶೀದಿಯನ್ನು ಪಡೆಯಬಹುದು. ಪಾವತಿಸಿದ ಕೂಡಲೇ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದೆ. ಈ ವ್ಯವಸ್ಥೆಯಿಂದ ಸಮಯ ಉಳಿತಾಯವಾಗಲಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಎಸ್​ಆರ್ ನಡಿ ಅತ್ಯಾಧುನಿಕ 22 ಸ್ವೈಪಿಂಗ್ ಮಷಿನ್​ಗಳನ್ನು ನೀಡಿದೆ. ನೆರವು ಸಂಸ್ಥೆಯ ಕ್ಷೇತ್ರ ಸಿಬ್ಬಂದಿ ಸ್ವೈಪಿಂಗ್ ಯಂತ್ರವನ್ನು ಬಳಕೆ ಮಾಡುವರು. ನಿರಂತರ ನೀರು ಯೋಜನೆಯ ವಿಡಿಯೋ ಡಾಕ್ಯುಮೆಂಟರಿ, ಅನಿಮೇಟೆಡ್ ಕ್ಲಿಪ್ಸ್​ಗಳನ್ನು ಗ್ರಾಹಕರಿಗೆ ಸ್ಥಳದಲ್ಲಿಯೇ ತೋರಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿರುವ ಟ್ಯಾಬ್​ಅನ್ನು ಉದ್ಘಾಟಿಸಲಾಯಿತು.

ಕೆಯುಐಡಿಎಫ್​ಸಿ ಕೇಂದ್ರ ಕಚೇರಿಯ ಶಂಭು ಭಟ್, ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಎಲ್ ಆಂಡ್ ಟಿ ಕಂಪನಿ, ಎಸ್​ಬಿಐ ಅಧಿಕಾರಿಗಳು ಇದ್ದರು.

ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ

ಸ್ಮಾರ್ಟ್ ಸಿಟಿ ಅನುದಾನದಲ್ಲಿ ಹುಬ್ಬಳ್ಳಿಯಲ್ಲಿ ಕೈಗೊಂಡಿರುವ ತೋಳನಕೆರೆ ಉದ್ಯಾನ ನವೀಕರಣ, ಚಿಟಗುಪ್ಪಿ ಆಸ್ಪತ್ರೆ ಹಾಗೂ ಪ್ರಗತಿಯಲ್ಲಿರುವ ಹಳೇ ಬಸ್ ನಿಲ್ದಾಣ ಮರು ನಿರ್ಮಾಣ ಕಾಮಗಾರಿಯನ್ನು ಕೆಯುಐಡಿಎಫ್​ಸಿ ಎಡಿ ಶರತ್ ಬಿ. ಪರಿಶೀಲಿಸಿದರು.

ನೀರು ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ನೀರಸಾಗರ ಜಲಾಶಯ, ದುಮ್ಮವಾಡ ಪಂಪ್​ಹೌಸ್, ಕಣವಿಹೊನ್ನಾಪುರ ಜಲಶುದ್ಧೀಕರಣ ಘಟಕ, ನಿರಂತರ ನೀರು ಯೋಜನೆಯಡಿ ಕೈಗೆತ್ತಿಕೊಂಡಿರುವ ಗೌರಿಶಂಕರನಗರದಲ್ಲಿನ ಜಲಸಂಗ್ರಹಕಾರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.

ಹುಬ್ಬಳ್ಳಿ ಹೊಸೂರಿನಲ್ಲಿರುವ ಕೇಂದ್ರೀಕೃತ ನೀರು ಸರಬರಾಜು ದೂರು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿಯ ಕಾರ್ಯನಿರ್ವಹಣೆಯ ಮಾಹಿತಿಯನ್ನು ಪಡೆದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಕೆಯುಐಡಿಎಫ್​ಸಿ ಕಾರ್ಯವ್ಯವಸ್ಥಾಪಕ ನಂದೀಶ, ಕಾರ್ಯನಿರ್ವಾಹಕ ಇಂಜಿನಿಯರ್ ಸುನೀಲ ಸಾಲಿ, ಇತರರು ಇದ್ದರು.