ಪ್ರಮುಖ ಮುಖ್ಯಾಂಶಗಳು
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ಪಾದನೆ ಕುಸಿತ ಕಂಡಿರುವ ಗೇರು ಹಣ್ಣು ಮತ್ತು ಗೋಡಂಬಿ ಬೆಳೆಯನ್ನು ಬೆಳೆಯಲು ವಿಪುಲ ಅವಕಾಶವಿದ್ದು, ಗೇರು ಅಭಿವೃದ್ಧಿ ನಿಗಮದ ವತಿಯಿಂದ ಗುಣಮಟ್ಟದ ಕಸಿ ಮಾಡಿದ ಗೋಡಂಬಿ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲಾಗುವುದು. ಇದಕ್ಕಾಗಿ ಗೇರು ನಿಗಮಕ್ಕೆ 1 ಕೋಟಿ ರೂ. ಅನುದಾನ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದರು.
ಗೇರು ಅಭಿವೃದ್ಧಿ ಮಂಡಳಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಗೇರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಎಂಡೋಸಲ್ಫಾನ್ ದುರಂತದ ಬಳಿಕ ಹಲವು ರೈತರು ಗೇರು ಬೆಳೆಯುವುದರಿಂದಲೇ ವಿಮುಖರಾಗಿದ್ದಾರೆ. ಇವರಿಗೆ ಮತ್ತೆ ಉತ್ತೇಜನ ನೀಡಿ ಗತವೈಭವ ಮರಳುವಂತೆ ಮಾಡಬೇಕಾಗಿದೆ. ಗೇರು ಮೌಲ್ಯವರ್ಧನೆಗೆ ಒತ್ತು ನೀಡಬೇಕಿದೆ. ರೈತರಿಗೆ ಹೆಚ್ಚಿನ ಮಾಹಿತಿ ಪೂರೈಸಿದರೆ ಉತ್ಪಾದನಾ ವೆಚ್ಚ ತಗ್ಗಿ ಆದಾಯ ಹೆಚ್ಚುತ್ತದೆ" ಎಂದರು.
ಇಂತಹ ಮೇಳ, ಕಾರ್ಯಾಗಾರಗಳ ಮೂಲಕ ರೈತರಿಗೆ ಮಾಹಿತಿಯ ಜೊತೆಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುವುದು. ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲಾಗುವುದು ಎಂದರು.
ವೃಕ್ಷ ಸಂರಕ್ಷಿಸಿ: ಇಂದು ನಾವು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತದೆ. ಈ ರೀತಿಯ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾಗುತ್ತಿದೆ. ಹೀಗಾಗಿ ವೃಕ್ಷ ಸಂರಕ್ಷಣೆಗೆ ನಾವೆಲ್ಲರೂ ಸಂಕಲ್ಪ ಮಾಡಬೇಕು. ಹಸಿರು ಹೊದಿಕೆ ಹೆಚ್ಚಿಸಬೇಕು ಎಂದರು.
ಬೃಹತ್ ಪಾರ್ಕ್ ನಿರ್ಮಾಣ:ಒತ್ತುವರಿಯಾದ ಅರಣ್ಯ ಭೂಮಿಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಂತಹ ಇನ್ನೊಂದು ದೊಡ್ಡ ಪಾರ್ಕ್ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗುವುದು ಎಂದು ಹೇಳಿದ ಸಚಿವರು, ನಷ್ಟದಲ್ಲಿದ್ದ ಗೇರು ಅಭಿವೃದ್ಧಿ ನಿಗಮವನ್ನು ಲಾಭದತ್ತ ತೆಗೆದುಕೊಂಡು ಹೋಗುವಲ್ಲಿ ಮಮತಾ ಗಟ್ಟಿ ಅವರು ಶ್ರಮಿಸಿದ್ದು, ಅಭಿನಂದನಾರ್ಹರು ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಡಿ. ರಾಜೇಗೌಡ, ಐವನ್ ಡಿಸೋಜಾ, ಅಶೋಕ್ ಕುಮಾರ್ ರೈ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸಚಿವ ರಮಾನಾಥ್ ರೈ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿವಿಧ ನಿಗಮಗಳ ಅಧ್ಯಕ್ಷರುಗಳಾದ ಎಂ.ಎ. ಗಫೂರ್, ತಾರಾನಾಥ್ ಗಟ್ಟಿ ಕಾಪಿಕಾಡ್, ಸದಾಶಿವ ಉಳ್ಳಾಲ, ಉಮ್ಮರ್ ಯು.ಎಚ್., ಸದಾನಂದ ಮಾವಜಿ, ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ವಿಜಯ ಕುಮಾರ್ ರೈ, ಅರಣ್ಯ ಸಂರಕ್ಷಣಾಧಿಕಾರಿ ಕಮಲಾ ಕರಿಕಾಳನ್, ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್., ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 12 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.