ಜಿಲ್ಲೆ

ಉಪ್ಪಳದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು

ಇಂದಿರಾ ಎನ್ ಕೆ

ಕಾಸರಗೋಡು: ಉಪ್ಪಳ ಪತ್ವಾಡಿಯ ಮಹಮ್ಮದಾಲಿ ರಸ್ತೆ ನಿವಾಸಿ ಅಬ್ದುಲ್ ರಜಾಕ್ ಎಂಬುವರ ಮನೆಗೆ ನುಗ್ಗಿದ ಕಳ್ಳರು ಐದು ಪವನ್ ಚಿನ್ನ ಮತ್ತು 30 ಸಾವಿರ ರೂ. ನಗದು ದೋಚಿದ್ದಾರೆ.

ಅಬ್ದುಲ್ ರಜಾಕ್ ಕುಟುಂಬ ಏ.18ರಂದು ವಿದೇಶಕ್ಕೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿ ಕಳವು ನಡೆಸಿರಬೇಕೆಂದು ಸಂಶಯಿಸಲಾಗಿದೆ. ಸ್ಥಳೀಯ ನಿವಾಸಿ ಯೂಸುಫ್ ಎಂಬುವರು ಮನೆ ಸನಿಹ ತೆರಳಿ ನೋಡಿದಾಗ ಹಿಂಭಾಗದ ಬಾಗಿಲು ಒಡೆದ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು. ಯೂಸುಫ್ ಅವರ ದೂರಿನ ಮೇರೆಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ನಗ, ನಗದು ಕಳವಾಗಿರುವುದು ಪತ್ತೆಯಾಗಿದೆ. ಬೆರಳಚ್ಚು ಹಾಗೂ ಶ್ವಾನ ದಳ ಸಿಬ್ಬಂದಿ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಇತ್ತೀಚೆಗಷ್ಟೆ ಉಪ್ಪಳ ಮಜಲ್ ನಿವಾಸಿ ಮಹಮ್ಮದ್ ರಫೀಕ್ ಮನೆಗೆ ನುಗ್ಗಿದ ಕಳ್ಳರು ಏಳು ಪವನ್ ಚಿನ್ನ ಮತ್ತು 60 ಸಾವಿರ ರೂ. ನಗದು ದೋಚಿದ್ದರು. ಮಹಮ್ಮದ್ ರಫೀಕ್ ಮನೆಯವರು ಉಮ್ರಾಗೆ ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದ್ದು, ಇದುವರೆಗೆ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.