ಜಿಲ್ಲೆ

ಪಟಾಕಿ 'ಠುಸ್​'ಗೊಳಿಸಿದ ಖಾಕಿ ಪಡೆ

ವಿವಿಧೆಡೆ ಅಕ್ರಮವಾಗಿ ಸುಡುಮದ್ದು ದಾಸ್ತಾನು

ಐವರು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು

ಕೋಟ್ಯಂತರ ರೂ. ಮೌಲ್ಯದ ವಸ್ತು ವಶಕ್ಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸುಡುಮದ್ದು (ಪಟಾಕಿ) ಸಂಗ್ರಹಿಸಿದ್ದ ವ್ಯಾಪಾರಿಗಳಿಗೆ ಜಿಲ್ಲಾ ಪೊಲೀಸ್​ ಇಲಾಖೆ ಬಿಸಿ ಮುಟ್ಟಿಸಿದೆ. ಕೃತಕವಾಗಿ ಪಟಾಕಿ ಮಾರುವುದಿದ್ದರೂ ಸಹ ಸ್ಥಳೀಯ ಆಡಳಿತದಿಂದ ಎನ್​ಒಸಿ ಪಡೆಯುವಂತೆ ಜಿಲ್ಲಾಡಳಿತ ತಿಳಿಸಿದ್ದರೂ ಸಹ ಅದನ್ನು ನಿರ್ಲಕ್ಷಿಸಿದ್ದ ಐವರು ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಠಾಣಾ ಪೊಲೀಸರು ಮೂರು ಕಡೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಕೋಟ್ಯಂತರ ರೂ. ಮೌಲ್ಯದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕೋಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ತೆಕ್ಕಟ್ಟೆ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮನೆಯ ಶೆಡ್​ನಲ್ಲಿ ಕುಂದಾಪುರ ತಾಲೂಕಿನ ಕೆ.ಪ್ರಶಾಂತ ಜೋಗಿ (44) ಎಂಬವರು ಯಾವುದೇ ಪರವಾನಗಿ ಪಡೆಯದೆ, ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಹಾಗೂ ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಪಟಾಕಿ ದಾಸ್ತಾನು ಮಾಡಿದ್ದರು. ಸುಮಾರು 1,61,372 ರೂ. ಮೌಲ್ಯದ ವಿವಿಧ ಕಂಪನಿಗಳ 332 ಬಾಕ್ಸ್​ ಪಟಾಕಿಗಳನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬ್ರಹ್ಮಾವರ ಪೊಲೀಸ್​ ಠಾಣಾ ವ್ಯಾಪ್ತಿಯ ಆರೂರು ಗ್ರಾಮದ ಕುಂಜಾಲು ಎಂಬಲ್ಲಿ ಮನೆಯ ಪಕ್ಕದ ಶಾಮಿಯಾನ ಗೋಡಾನ್​ನಲ್ಲಿ ಶಿವಾನಂದ ರಾವ್​ (50) ಎಂಬವರು ಅಕ್ರಮವಾಗಿ ಸುಡುಮದ್ದು ದಾಸ್ತಾನು ಮಾಡಿದ್ದರು. ಅಂದಾಜು 35 ಸಾವಿರ ರೂ. ಮೌಲ್ಯದ ವಿವಿಧ ಕಂಪನಿಗಳ 16 ಬಾಕ್ಸ್​ ಪಟಾಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮೂರು ಲಾರಿಗಳಷ್ಟು ಪಟಾಕಿ ಬಾಕ್ಸ್​ ದಾಸ್ತಾನು

ಕಾರ್ಕಳ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮಿಯಾರು ಗ್ರಾಮದ ದೆಂದಬೆಟ್ಟು ಎಂಬಲ್ಲಿ ಹಳೆಯ ವಾಸದ ಮನೆಯಲ್ಲಿ ಸತ್ಯೇಂದ್ರ ಎಲ್​. ನಾಯಕ್​ (70) ಎಂಬವರು ಸುಮಾರು ಮೂರು ಲಾರಿಗಳಾಗುವಷ್ಟು ಪಟಾಕಿಯಿರುವ ಕೋಟ್ಯಂತರ ರೂ. ಮೌಲ್ಯದ ವಿವಿಧ ಕಂಪನಿಗಳ ಬಾಕ್ಸ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಅವುಗಳನ್ನು ಪರಿಶೀಲಿಸಲು ಪೊಲೀಸರಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಸಮಯ ತಗುಲಿತ್ತು. ಪಟಾಕಿ ಸಂಗ್ರಹಿಸಿದ್ದ ಇನ್ನಿತರ ಆರೋಪಿಗಳಾದ ರಮಾನಂದ ನಾಯಕ್​ (48), ಶ್ರೀಕಾಂತ ನಾಯಕ (37) ವಿರುದ್ಧ ಪ್ರಕರಣ ದಾಖಲಾಗಿದೆ.
ದೀಪಾವಳಿ ಹಬ್ಬಕ್ಕಾಗಿ ಪಟಾಕಿ ಮಾರಾಟ ಮಾಡಲು ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ಜಿಲ್ಲಾಡಳಿತ ಸೂಚಿಸಿದ್ದರೂ ಸಹ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದೇವೆ. ಅವುಗಳನ್ನು ಪರವಾನಗಿ ಹೊಂದಿರುವ ಮ್ಯಾಗಜೀನ್​ (ಸ್ಫೋಟಕಗಳು) ಸಂಗ್ರಹಣಾ ಪ್ರದೇಶದಲ್ಲಿ ನಾಶಪಡಿಸಲಾಗುವುದು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಹರಿರಾಮ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ