ಲಕ್ಷ್ಮೇಶ್ವರ: ಬಿಜೆಪಿ ಜಾರಿಗೊಳಿಸಿದ ಒಳಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಚುನಾವಣೆಯಲ್ಲಿ ಲಂಬಾಣಿ ಸಮಾಜದವರು ಬಿಜೆಪಿಗೆ ಮತ ಹಾಕಬಾರದು ಎಂದು ತಾಲೂಕಿನ ಆದ್ರಳ್ಳಿಯ ಲಂಬಾಣಿ ಸಮಾಜದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ಲಂಬಾಣಿಗರಿಂದ ಆಣೆ-ಪ್ರಮಾಣ ಮಾಡಿಸಿದ್ದಾರೆ.
ಯಾವುದೇ ಪಕ್ಷಕ್ಕೆ ಮತ ಹಾಕಬಾರದು ಎಂದು ಆಣೆ ಪ್ರಮಾಣ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಕುರಿತು ತಹಸೀಲ್ದಾರ್ ಕೆ. ಆನಂದಶೀಲ ಅವರು ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಕೊರಚ ಜತೆಗೆ ಮುಸ್ಲಿಂ ಜನಾಂಗದವರು ಸೇರಿ ಶನಿವಾರ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಜನರನ್ನು ಆಹ್ವಾನಿಸುವ ಸಂದರ್ಭದಲ್ಲಿ ಸ್ವಾಮೀಜಿ ಈ ರೀತಿ ಪ್ರಮಾಣ ಮಾಡಿಸಿದ್ದಾರೆ.
‘ಅಜ್ಜಾರ ನಾವು ದೇವರ ಹೆಸರ ಮೇಲೆ ಪ್ರಮಾಣ ಮಾಡುತ್ತೇವೆ.
ನಿಷ್ಠೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಕುಲಗುರು ಸಂತ ಸೇವಾಲಾಲ್, ಸಿದ್ಧರಾಮೇಶ್ವರ ಮೇಲೆ ಪ್ರಮಾಣ ಮಾಡುತ್ತೇವೆ.
ನಾವೆಂದೂ ಬಿಜೆಪಿಗೆ ಮತ ಕೊಡುವುದಿಲ್ಲ. ನಿಮ್ಮ ಮೇಲೆ ಮತ್ತು ಗವಿಸಿದ್ಧಪ್ಪಜ್ಜನ ಮೇಲೆ ಪ್ರಮಾಣ ಮಾಡುತ್ತೇವೆ’ ಸಮುದಾಯದ ಜನರು ಪ್ರಮಾಣ ಮಾಡಿದ್ದಾರೆ.
‘ಒಳಮೀಸಲಾತಿ ಜಾರಿಗೊಳಿಸಿ ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ. ನಿಮಗೆಲ್ಲ ನೆನಪಿರಲಿ ನೀವೆಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತಹಾಕಿ, ಆದರೆ, ಬಿಜೆಪಿಗೆ ಮತ ಹಾಕಬೇಡಿ. ನಮ್ಮ ಉಣ್ಣ ತಾಟ ಕಸಗೊಳ್ಳುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು.
ಮೀಸಲಾತಿ ತೆಗೆದರೆ ಹಸಿರು ರೇಷನ್ ಕಾರ್ಡ್ ಬಂದಾಗುತ್ತದೆ. ಅಕ್ಕಿ- ಗೋಧಿ, ಉದ್ಯೋಗಕ್ಕೆ ಸಮಸ್ಯೆಯಾಗುತ್ತದೆ’ ಎಂದು ಕುಮಾರ ಮಹಾರಾಜ ಸ್ವಾಮೀಜಿ ಹೇಳಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.