ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ತಿರುಮಲೈ ರೋಲರ್ ಫ್ಲೋರ್ ಮಿಲ್ಸ್ ಕಂಪನಿಗೆ ಸೇರಿದ 2.06 ಎಕರೆ ಜಾಗವನ್ನು ಕಾನೂನು ಬಾಹಿರವಾಗಿ ಬೋಗಸ್ ವ್ಯಕ್ತಿಗೆ ಪೌತಿ ಖಾತೆ ಮಾಡಿಕೊಟ್ಟಿರುವುದನ್ನು ಕೂಡಲೇ ರದ್ದು ಮಾಡಬೇಕು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀಕಂಠಪ್ಪ ಆಗ್ರಹಿಸಿದರು.
ಕಂಪನಿ ಖರೀದಿ ಮಾಡಿದ 2.06 ಎಕರೆ ಭೂಮಿಯು ಈ ಹಿಂದೆ ಖರಾಬ್ ಭೂಮಿಯಾಗಿತ್ತು. ಖರಾಬ್ ಭೂಮಿಯನ್ನು 1975ರಲ್ಲಿ ಜಿಲ್ಲಾಧಿಕಾರಿ ಅನ್ಯಕ್ರಾಂತ ಮಾಡಿಕೊಟ್ಟಿದ್ದು, ಅನ್ಯಕ್ರಾಂತವಾದ ಭೂಮಿಯನ್ನು ಕಂಪನಿ 1982 ರಲ್ಲಿ ಖರೀದಿ ಮಾಡಿ ಮೈಸೂರು ಉತ್ತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿತು. ಅಲ್ಲದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ಕೈಗಾರಿಕಾ ವಿನ್ಯಾಸ ನಕ್ಷೆಗೆ 2010ರಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಂಪನಿಗೆ ಪ್ರಾರಂಭದಲ್ಲಿ ಎಂ.ಎನ್. ನರಸಿಂಹಣ್ಣ, ಆರ್. ವೆಂಕಟಪ್ಪ, ವಿ. ವೆಂಕಟರಾಮಯ್ಯ ಹಾಗೂ ವಿ. ಕೃಷ್ಣ ನಿರ್ದೇಶಕರಾಗಿ ದ್ದರು. ಪ್ರಸ್ತುತ ಆನಂದನ್ ರಾಮಲಿಂಗಮ್ ತ್ಯಾಗರಾಜನ್, ಮಧು ಶ್ರೀಕಂಠಪ್ಪ, ಬಿ. ಶ್ರೀಕಂಠಪ್ಪ ನಿರ್ದೇಶಕರಾಗಿದ್ದಾರೆ. ಎಂ.ಎನ್. ನರಸಿಂಹಣ್ಣ ನಿಧನ ಹೊಂದಿದ್ದಾರೆ. ಅವರ ನಿಧನ ನಂತರ ಅವರ ಕುಟುಂಬಕ್ಕೆ ಷೇರು ಹಣವನ್ನು ವರ್ಗಾಯಿಸಲಾಗಿದೆ. ಹೀಗಾಗಿ ನರಸಿಂಹಣ್ಣ ಅವರ ಕುಟುಂಬಕ್ಕೂ ಈ ಕಂಪನಿಯ ಆಸ್ತಿಗೂ ಸಂಬಂಧವಿಲ್ಲ. ಆದರೆ, ಸದರಿ ಜಾಗವನ್ನು ಕಬಳಿಸಲು ಎಂ.ಎನ್. ನರಸಿಂಹಣ್ಣ ಪತ್ನಿ ಜಯಲಕ್ಷ್ಮಿ ಹಾಗೂ ಅವರ ಮಗಳು ಜಯಶ್ರೀ ಅವರ ಹೆಸರಿಗೆ ಕಾನೂನು ಬಾಹಿರವಾಗಿ 11-8-2022 ರಂದು ಕಾನೂನು ಬಾಹಿರವಾಗಿ ಪೌತಿ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
ಎಂ.ಎನ್. ನರಸಿಂಹಣ್ಣ ಅವರ ಪತ್ನಿ ಎಂದು ಹೇಳಿಕೊಳ್ಳುತ್ತಿರುವ ಬೆಂಗಳೂರಿನ ಜಯಶ್ರೀ ಅವರಿಗೂ ನಮ್ಮ ಕಂಪನಿಯ ನಿರ್ದೇಶಕ ರಾಗಿದ್ದ ಎಂ.ಎನ್. ನರಸಿಂಹಣ್ಣ ಅವರಿಗೂ ಯಾವುದೇ ಸಂಬಂಧವಿಲ್ಲ. ಎಂ.ಎನ್. ನರಸಿಂಹಣ್ಣ ಅವರ ಪತ್ನಿ ಸಿ. ಚೂಡಾಮಣಿಯಾಗಿದ್ದು, ಅವರು ಅನಾರೋಗ್ಯದಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಕುರಿತು ದೂರು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮುಡಾದಿಂದ ಏಕ ನಿವೇಶನ ಕೈಗಾರಿಕಾ ವಿನ್ಯಾಸ ನಕ್ಷೆಗೆ ಅನುಮತಿ ಪಡೆದಿರುವ ಜಾಗದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕು ಇರುವುದಿಲ್ಲ. ಹಾಗಿದ್ದರೂ ಗ್ರಾಮ ಲೆಕ್ಕಿಗ ನಾಗೇಶ್ ಕುಮಾರ್, ರಾಜಸ್ವ ನಿರೀಕ್ಷಕ ಬಿ.ಎಂ. ರಾಘವೇಂದ್ರ ನಾಯ್ಕ, ತಹಶೀಲ್ದಾರ್ ಗಿರೀಶ್ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಕಾನೂನು ಬಾಹಿರವಾಗಿ ಬೋಗಸ್ ವ್ಯಕ್ತಿಯ ಹೆಸರಿಗೆ ಪೌತಿ ಖಾತೆ ಮಾಡಿಸಿಕೊಟ್ಟಿ ದ್ದಾರೆ. ಆಗಿರುವ ತಪ್ಪನ್ನು ಸರಿಪಡಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಅವರು ಸ್ಪಂದಿಸಲಿಲ್ಲ. ಆ ನಂತರ ಅನಿವಾರ್ಯವಾಗಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರ್ ಕೂಡಲೇ ಪೌತಿ ಖಾತೆಯನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ನ್ಯಾಯಾಂಗ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.