ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶ ದಿಂದ ಸರ್ಕಾರ ಲಾಕ್ಡೌನ್ಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ 12 ಗಂಟೆಯಿಂದ ಮಾ.31ರವರೆಗೆ ನಿಷೇಧಾಜ್ಞೆ ವಿಧಿಸಿದ್ದಾರೆ.
ಜನರ ಸುರಕ್ಷತೆಗೆ ನಗರದಲ್ಲಿ ಸೋಮವಾರ ತಡರಾತ್ರಿಯಿಂದ 144 ಸೆಕ್ಷನ್ ವಿಧಿಸಲಾಗಿದೆ. 5ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿಗೆ ಯಾವುದೇ ವಾಹನ ಬರುವಂತಿಲ್ಲ. ಬೇರೆ ಜಿಲ್ಲೆಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ನಗರ ಪ್ರವೇಶಿಸುವ 12 ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿ ತಪಾಸಣೆ ಮಾಡಲಾಗುತ್ತಿದೆ. ಸುಖಾಸುಮ್ಮನೆ ರಸ್ತೆಗೆ ಬರುವುದು, ಕ್ರಿಕೆಟ್ ಆಡುವುದು, ಮೊಬೈಲ್ ಸೆಲ್ಪಿಗೆ ಬರುವುದು ಮಾಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಓಲಾ, ಉಬರ್, ಆಟೊರಿಕ್ಷಾ ಸೇರಿ ಎಲ್ಲ ಖಾಸಗಿ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗಿದೆ. ನಗರದ ಎಲ್ಲ ಮೇಲ್ಸೇತುವೆಗಳ ಸಂಚಾರ ನಿರ್ಬಂಧಿಸಲಾಗಿದೆ. ಪೊಲೀಸ್ ಕಂಟ್ರೋಲ್ ಕಚೇರಿಯ ಸಿಬ್ಬಂದಿಗೆ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ವಸತಿ ಸಂಕೀರ್ಣಗಳಿಗೆ ದಿನಸಿ ವಿತರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ. ನಗರ ಪೇಯಿಂಗ್ ಗೆಸ್ಟ್ಗಳು ಯಾವುದೇ ಕಾರಣಕ್ಕೂ ಮುಚ್ಚ ಬಾರದು. ಹೊಟೇಲ್ಗಳಲ್ಲಿ ಉಳಿದುಕೊಂಡಿರುವ ಅತಿಥಿ ಗಳಿಗೆ ಊಟ ವ್ಯವಸ್ಥೆ ಹೊರತುಪಡಿಸಿ ಬೇರೆ ಯಾವ ಸೌಲಭ್ಯ ಒದಗಿಸಕೂಡದು ಎಂದು ಆಯುಕ್ತರು ಸೂಚಿಸಿದ್ದಾರೆ.
ರಸ್ತೆ ಮೇಲೆ ಅನಗತ್ಯವಾಗಿ ತಿರುಗಾಡುವಂತಿಲ್ಲ. ನಿಯಮ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಐಪಿಸಿ 188ರ ಅಡಿ ಕ್ರಮ ತೆಗೆದುಕೊಳ್ಳಲಾಗುವುದು. | ಭಾಸ್ಕರ್ ರಾವ್ ಪೊಲೀಸ್ ಆಯುಕ್ತ
ಏನಿರುತ್ತೆ, ಏನಿರಲ್ಲ?
ಹಣ್ಣು, ತರಕಾರಿ, ಮಾಂಸದಂಗಡಿ, ಸೂಪರ್ ಬಜಾರ್, ಎಟಿಎಂ ಸೇವೆ, ಆಹಾರ ಸರಬರಾಜು ಹೋಟೆಲ್, ಕುಡಿಯುವ ನೀರು, ದಿನಸಿ ಅಂಗಡಿ, ಔಷಧ ಅಂಗಡಿಗಳಿಗೆ ತೆರೆಯಲು ಹಾಗೂ ಖಾಸಗಿ ಸೆಕ್ಯುರಿಟಿ, ಕೊರಿಯರ್, ಮಾಧ್ಯಮಗಳಿಗೆ ವಿನಾಯಿತಿ ನೀಡಲಾಗಿದೆ. ಮಾಲ್, ಹೋಟೆಲ್, ಎಲೆಕ್ಟ್ರಾನಿಕ್ ಅಂಗಡಿ, ಬಟ್ಟೆ ಅಂಗಡಿ, ಮದ್ಯದಂಗಡಿ ಸೇರಿ ವಾಣಿಜ್ಯ ಅಂಗಡಿಗಳು ತೆರೆಯುವಂತಿಲ್ಲ.
ಸೀಲ್ ಇದ್ದವರ ವಿರುದ್ಧ ಕ್ರಮ
ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದು ಸೀಲ್ ಹಾಕಿಕೊಂಡಿರುವ ವ್ಯಕ್ತಿಗಳು ಎಲ್ಲೆಂದರಲ್ಲಿ ಓಡಾಡಬಾರದು. ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವ್ಯಕ್ತಿಗಳನ್ನು ಐಪಿಸಿ ಸೆಕ್ಷನ್ 269, 270ರ ಪ್ರಕಾರ ವಶಕ್ಕೆ ಪಡೆಯಲಾಗುವುದು ಎಂದು ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ನಮ್ಮ 100ಗೆ ಮಾಹಿತಿ ಮುಟ್ಟಿಸಿ
ಬೆಂಗಳೂರು: ವಿದೇಶದಿಂದ ರಾಜ್ಯಕ್ಕೆ ಆಗಮಿಸಿರುವ ಜನರು ಮನೆಯಲ್ಲಿ ಗೃಹಬಂಧನದಲ್ಲಿರದೆ, ಹೊರಗಡೆ ಓಡಾಡುವುದು ಕಂಡುಬಂದಲ್ಲಿ ‘ನಮ್ಮ 100’ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಮಾ.19ರ ನಂತರ ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ, ಅವರ ಕೈಗೆ ಮೊಹರು ಹಾಕಲಾಗಿದೆ. ಸೋಂಕು ಪತ್ತೆಯಾಗದವರಿಗೆ 14 ದಿನಗಳವರೆಗೆ ಗೃಹಬಂಧನದಲ್ಲಿ ಇರುವಂತೆ ಸೂಚಿಸಲಾಗಿದೆ.
ಆದಾಗ್ಯೂ ಕರೊನಾ ವೈರಸ್ ಸೋಂಕು ಹರಡುತ್ತಿರುವ ಸೂಕ್ಷ್ಮತೆ ಯನ್ನು ಮರೆತು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಅಂತವರ ಬಗ್ಗೆ ‘ನಮ್ಮ 100’ ಮೂಲಕ ಪೊಲೀಸರಿಗೆ ಮಾಹಿತಿ ಕೊಡಿ. ಕೂಡಲೇ ವಶಕ್ಕೆ ಪಡೆದು ಸರ್ಕಾರದ ಕ್ವಾರಂಟೈನ್ನಲ್ಲಿಟ್ಟು ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.