ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಟಿ.ಡಿ.ಮೇಘರಾಜ್, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಎಂ.ಬಿ.ಭಾನುಪ್ರಕಾಶ್, ಹರತಾಳು ಹಾಲಪ್ಪ, ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಮಾಲತೇಶ್, ಸಂತೋಷ್ ಬಳ್ಳಕೆರೆ, ಸುನೀತಾ ಅಣ್ಣಪ್ಪ ಇದ್ದರು. 
ಜಿಲ್ಲೆ

ಕಪ್ಪುಪಟ್ಟಿ ಪ್ರದರ್ಶಿಸಿದ್ದಕ್ಕೆ ಕೇಸ್, ಪೊಲೀಸರ ನಡೆಗೆ ಬಿಜೆಪಿ ಅಸಮಾಧಾನ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಬುಧವಾರ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮತ್ತು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿ ಪೊಲೀಸ್ ಇಲಾಖೆ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಲಾಖೆ ತಕ್ಷಣ ತನ್ನ ನಿಲುವು ಬದಲಿಸಿಕೊಳ್ಳಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಮಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಭಾಷಣಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಅಡ್ಡಿಪಡಿಸಿದ್ದರು. ಶಿಷ್ಠಾಚಾರ ಉಲ್ಲಂಘಿಸಿ ಘಟಿಕೋತ್ಸವ ಸಭಾಂಗಣದೊಳಗೆ ಘೋಷಣೆ ಕೂಗಿದ್ದರು. ಅದು ರಾಜ್ಯಪಾಲರ ಕಾರ್ಯಕ್ರಮದಲ್ಲಿನ ಭದ್ರತಾ ವೈಲ್ಯ ಕೂಡ ಆಗಿತ್ತು. ಆದರೆ ಈ ಬಗ್ಗೆ ಪೊಲೀಸರು ಯಾರ ಮೇಲೆಯೂ ಎಫ್‌ಐಆರ್ ದಾಖಲಿಸಲಿಲ್ಲ ಎಂದು ದೂರಿದರು.
ಪಠ್ಯದಲ್ಲಿ ವೀರ ಸಾವರ್ಕರ್ ಪಠ್ಯ ತೆಗೆದುಹಾಕಿದ್ದಕ್ಕೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಪಂ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಭಾಂಗಣದೊಳಗೆ ನುಗ್ಗಿ ಧಿಕ್ಕಾರ ಕೂಗಿ ಕಪ್ಪುಪಟ್ಟಿ ಪ್ರದರ್ಶಿಸಿದ್ದರು. ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಮೇಯರ್ ಎಸ್.ಶಿವಕುಮಾರ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಮಾಲತೇಶ್, ಸಂತೋಷ್ ಬಳ್ಳಕೆರೆ, ಸುನೀತಾ ಅಣ್ಣಪ್ಪ ಇತರರಿದ್ದರು.