ರಾಮನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆ ಕೆಲಸ ಮಾಡುತ್ತಿರುವ ಮಹಿಳಾ ನೌಕರರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಚಕರಹಳ್ಳಿ ಬಳಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಹೊರಗುತ್ತಿಗೆ ಅಡುಗೆ ನೌಕರರಾಗಿರುವ ಮಂಜುಳ ಎಂಬುವರು ನೀಡಿರು ದೂರಿನ ಹಿನ್ನೆಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಮಾಲ ಮತ್ತು ವಾರ್ಡನ್ ಸಾಕಮ್ಮ ಎಂಬುವರ ವಿರುದ್ಧ ಬಿಎನ್‌ಎಸ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೊರಗುತ್ತಿಗೆ ಮೇಲೆ ಅಡುಗೆ ಕೆಲಸ ಮಾಡುತ್ತಿರುವ ನನ್ನ ಮೇಲೆ ಹಾಸ್ಟೆಲ್ ವಾರ್ಡನ್ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆಲಸಕ್ಕೆ ಬರಬೇಡ ಎಂದು ದಮಕಿ ಹಾಕಿದ್ದಲ್ಲದೆ, ಅವಾಚ್ಯಶಬ್ಧಗಳಿಂದ ಬೈಯ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಜಾತಿನಿಂದನೆ ಮಾಡಿದ್ದಾರೆ. ಇವರಿಂದ ಹಲ್ಲೆ ಗೊಳಗಾಗಿರುವ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಮಂಜುಳ ಅವರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.