ಬೆಂಗಳೂರು: ಕಲಾಸಿಪಾಳ್ಯದಲ್ಲಿ ಪಾಲಿಕೆ ಸದಸ್ಯೆಯ ಪತಿ ಹಾಗೂ ಪುತ್ರನ ಮೇಲೆ ಸಗಣಿ ಎರಚಿದ್ದ ವಿಚಾರಕ್ಕೆ ಪ್ರತಿಭಟನೆ ನಡೆಸಿದ್ದ ಎರಡೂ ಗುಂಪುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಪೋರೇಟರ್ ಪ್ರತಿಭಾ ಪತಿ ಧನರಾಜ್, ಪುತ್ರ ವೈಷ್ಣವ್ ಹಾಗೂ ಮತ್ತೊಂದು ಗುಂಪಿನ ಸೆಂದಿಲ್, ರಮೇಶ್, ಮೊಹಮದ್ ಸೇರಿ ಒಟ್ಟು 12 ಮಂದಿ ವಿರುದ್ಧ ಕಲಾಸಿಪಾಳ್ಯ ಠಾಣೆ ಪೊಲೀಸರು 2 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 1.5 ಲಕ್ಷ ಟಿನ್ ಕೋಕ್ ಕುಡಿದ ಮಹಿಳೆಯ ವಯಸ್ಸು 74!
ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದನ್ನು ಲೆಕ್ಕಿಸದೆ ಜನರ ಗುಂಪು ಸೇರಿಸಿ ಮಾಸ್ಕ್ ಧರಿಸದೆ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ವಿಪತ್ತು ನಿರ್ವಹಣಾ ಉಲ್ಲಂಘನೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ (ಮೇ 13) ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಧನರಾಜ್ ಹಾಗೂ ಇತರರು ಬಿಬಿಎಂಪಿ ಅಧಿಕಾರಿಗಳ ಜತೆ ತೆರಳಿದ್ದರು. ಈ ವೇಳೆ ತರಕಾರಿ ವ್ಯಾಪಾರಿಗಳು ಸಗಣಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಫ್ತಾ ನೀಡುವಂತೆ ಕಾಪೋರೇಟರ್ ಪತಿ ಪೀಡಿಸುತ್ತಿದ್ದರು. ಹಣ ಕೊಡದಿದ್ದಕ್ಕೆ ಅಂಗಡಿ ತೆರವು ಮಾಡಲು ಬಂದಿದ್ದರೆಂದು ವ್ಯಾಪಾರಿಗಳು ಆರೋಪಿಸಿದ್ದರು. ಎರಡೂ ಕಡೆಯವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.