ಜಿಲ್ಲೆ

ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವಾಗಿ ಕಾರ್ಯಪ್ಪ ಕಾಲೇಜ್

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಕೊಡಗು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆ ಇದೆ ಎಂದು ನೂತನ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್ ತಿಳಿಸಿದರು.


ಫೀ.ಮಾ.ಕಾರ್ಯಪ್ಪ ಕಾಲೇಜ್‌ಗೆ ಶುಕ್ರವಾರ ಭೇಟಿ ನೀಡಿದ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ವರ್ಷ ಕಾಲೇಜು ಅಮೃತ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ನೂತನ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸುವುದು ಮತ್ತು ಇರುವ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಕೊಡಗು ವಿಶ್ವವಿದ್ಯಾನಿಲಯ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮುಂಚೂಣಿ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನಗಳಿಸುವಂತಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದರು.


ಇದಕ್ಕೂ ಮುನ್ನಾ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್‌ರವರು, ಪ್ರಚಲಿತದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸೌಲಭ್ಯಗಳ ಕುರಿತು ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತರಗತಿ ಪ್ರತಿನಿಧಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಇಸಿಸಿಸಿ, ಕ್ರೀಡೆ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.


ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವರವರು, ಕಾಲೇಜ್‌ನ ಇತಿಹಾಸ, ದೃಷ್ಟಿಕೋನ, ಸಾಧನೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.


ಈ ಸಂದರ್ಭ ನೂತನ ಕುಲಪತಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪರೀಕ್ಷಾಂಗ ಕುಲಸಚಿವ ಡಾ.ಸೀನಪ್ಪ ಹಾಗೂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ರಚ್.ಆರ್.ರಮೇಶ್, ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕ ಎಂ.ಎನ್.ರವಿಶಂಕರ್, ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಸಂಯೋಜಕ ಕೆ.ಎಂ.ಪೂಣಚ್ಚ ಇತರರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪರವರನ್ನು ಭೇಟಿ ಮಾಡಿದರು.