ಜಿಲ್ಲೆ

ಹೆದ್ದಾರಿ ಧಾರಣಾ ಸಾಮರ್ಥ್ಯ ಪರಿಶೀಲನೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಮಾಣಪತ್ರ ಸಲ್ಲಿಸುವ ಹಿನ್ನೆಲೆ

ಬಂಟ್ವಾಳ: ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಹಲವು ಕಡೆ ನೂತನ ಸೇತುವೆ, ಎಲಿವೇಟೆಡ್ ರೋಡ್, ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಿಸಲಾಗಿದ್ದು, ಅದರ ಧಾರಣಾ ಸಾಮರ್ಥ್ಯ ಪ್ರಮಾಣಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸುವ ಹಿನ್ನೆಲೆಯಲ್ಲಿ ಧಾರಣಾ ಸಾಮರ್ಥ್ಯ ಪರಿಶೀಲನೆ ನಡೆಸಲಾಯಿತು.

ಪಾಣೆಮಂಗಳೂರು, ಉಪ್ಪಿನಂಗಡಿಯಲ್ಲಿ ನದಿಗೆ ದೊಡ್ಡ ಸೇತುವೆಗಳು, ಉಳಿದಂತೆ ಸಣ್ಣಪುಟ್ಟ ಸೇತುವೆಗಳು, ಕಲ್ಲಡ್ಕದಲ್ಲಿ ಫ್ಲೈಓವರ್, ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ ಹಾಗೂ ನೆಲ್ಯಾಡಿಯಲ್ಲಿ ಎಲಿವೇಟೆಡ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಅಂತಹ ಎಲ್ಲ ನಿರ್ಮಾಣಗಳು ಎಷ್ಟು ಭಾರ ಹೊರುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಹೀಗಾಗಿ ಸದ್ಯಕ್ಕೆ ಕಾಮಗಾರಿ ಪೂರ್ಣಗೊಂಡ ಭಾಗಗಳಲ್ಲಿ ಧಾರಣಾ ಸಾಮರ್ಥ್ಯ ಪರಿಶೀಲಿಸಲಾಗುತ್ತಿದೆ.

ಹೆದ್ದಾರಿ ಕಾಮಗಾರಿ ಗುತ್ತಿಗೆ ನಿರ್ವಹಿಸುವ ಕಂಪನಿ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ತನ್ನ ಬೃಹತ್ ಗಾತ್ರದ 4 ಲಾರಿಗಳನ್ನು ಪೂರ್ತಿ ಲೋಡ್ ಮಾಡಿ ಸೇತುವೆಯಲ್ಲಿ ನಿಲ್ಲಿಸಿ ಧಾರಣಾ ಸಾಮರ್ಥ್ಯ ಪರಿಶೀಲಿಸುತ್ತಿದೆ. ಕಂಪನಿ ಮಾಹಿತಿ ಪ್ರಕಾರ ಅವುಗಳು 2 ಸಾವಿರ ಟನ್ ಭಾರ ಹೊರಬೇಕಿದೆ.

ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಕೆಎನ್‌ಆರ್ ಕಂಪನಿ ್ರಾಜೆಕ್ಟ್ ಮ್ಯಾನೇಜರ್ ಮಹೇಂದರ್ ರೆಡ್ಡಿ ಸೇರಿದಂತೆ ಪ್ರಾಧಿಕಾರ ಹಾಗೂ ಕಂಪನಿಯ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ್ದಾರೆ.