ಜಿಲ್ಲೆ

ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಭಿವೃದ್ಧಿ ಕೆಲಸ ನಿರ್ವಹಿಸಿ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 40ರ ಸಪ್ತಗಿರಿ ಪಾರ್ಕ್, ಆಶೀರ್ವಾದ ಕಾಲನಿ, ಬಣಗಾರ ಲೇಔಟ್, ಗ್ರೀನ್ ಪಾರ್ಕ್ ಹಾಗೂ ಗೋಲ್ಡನ್ ಪಾರ್ಕ್ ಪ್ರದೇಶಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸುಮಾರು 2.5 ಕಿಲೋಮೀಟರ ಮಾರ್ಗವನ್ನು ಪಾದಯಾತ್ರೆ ಮೂಲಕ ತೆರಳಿ ಪರಿಶೀಲನೆ ನಡೆಸಿದ ಶಾಸಕ ಟೆಂಗಿನಕಾಯಿ, ಸಾರ್ವಜನಿಕರ ಅಹವಾಲಗಳನ್ನು ಆಲಿಸಿದರು.

ಈ ವೇಳೆ ಸ್ಥಳೀಯ ನಿವಾಸಿಗಳು ಉತ್ತಮವಾದ ರಸ್ತೆ, ಬಸ್ ಸೌಕರ್ಯ, ಒಳಚರಂಡಿ, ನೀರಿನ ವ್ಯವಸ್ಥೆ , ಬೀದಿದೀಪ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.

ಸಾರ್ವಜನಿಕರ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಿದ ಶಾಸಕರು, ಶೀಘ್ರ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ, ಎಲ್ ಆಂಡ್ ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಿಗೆ ಸೂಚನೆ ನೀಡಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು, ಶಾಸಕರ ಸೂಚನೆಯಂತೆ ಶೀಘ್ರವಾಗಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ವಲಯ 6 ಸಹಾಯಕ ಆಯುಕ್ತ ಗಿರೀಶ ತಳವಾರ, ಪ್ರಮುಖರಾದ ಈಶ್ವರಗೌಡ ಪಾಟೀಲ, ಶ್ರೀಶೈಲ ಜೋಡಳ್ಳಿ , ಹನಮಂತ ಹರ್ತಿ ಹಾಗೂ ಇತರರು ಹಾಜರಿದ್ದರು.