ಹುಣಸೂರು: ತಾಲೂಕಿನ ವಿವಿಧ ದಲಿತ ಕಾಲನಿಗಳಲ್ಲಿ ಬಡಕುಟುಂಬಗಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿ ಇಲಾಖೆಗಳು ವಿಫಲವಾಗಿದೆ.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಸರ್ಕಾರಿ ಭೂಮಿಯಲ್ಲಿ ವಾಸವಿರುವ ಬಡಕುಟುಂಬಗಳಿಗೆ ಭೂಮಿಯ ಹಕ್ಕುಪತ್ರ ನೀಡಿರಿ.. ಕಟ್ಟೆಮಳಲವಾಡಿ ಗ್ರಾಮದ ನಾಲೆಯ ಪಕ್ಕದಲ್ಲಿ ವಾಸವಿರುವ ಕುಟುಂಬಗಳಿಗೆ ನಿವೇಶನ ನೀಡಿರಿ... ಎಂಬುದು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಎಸಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವರ್ಷದ ಎರಡನೇ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದ ಪರಿ ಇದಾಗಿತ್ತು.
ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಮಾತನಾಡಿ, ಹುಣಸೂರು ತಾಲೂಕಿನ ಬಾಚಳ್ಳಿ ರಸ್ತೆಯ ವಿನಾಯಕನಗರದ 13ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಸೋಲಿಗ ಸಮುದಾಯಕ್ಕೆ ಪೌಷ್ಟಿಕ ಆಹಾರ ನೀಡಬೇಕೆಂದು ಕಳೆದ 2-3 ಸಭೆಗಳಲ್ಲಿ ಕೋರುತ್ತಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಆಹಾರ ವಿತರಣೆಗೆ ಕ್ರಮವಹಿಸಬೇಕಿದೆ. ಆದರೆ ಈವರೆಗೆ ಯಾವೊಬ್ಬ ಅಧಿಕಾರಿಯೂ ಅತ್ತ ತಲೆಹಾಕಿಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದಾಗ, ಈ ಕೂಡಲೇ ಬಡಾವಣೆಗೆ ತೆರಳಿ ಮಾಹಿತಿ ಮತ್ತು ದಾಖಲೆಗಳನ್ನು ಕಲೆಹಾಕಿ ಪೌಷ್ಟಿಕ ಆಹಾರ ವಿತರಣೆಗೆ ಕ್ರಮವಹಿಸಲು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಂಗಾಧರ್ ಅವರಿಗೆ ಸೂಚಿಸಿದರು.
ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯ ಸರ್ಕಾರಿ ಭೂಮಿಯಲ್ಲಿ ವಾಸವಿರುವ ಬಡವರಿಗೆ 94 ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಒತ್ತಾಯಿಸಲಾಗುತ್ತಿದೆ. ಆದರೆ, ಅಲ್ಲಿನ ತಹಸೀಲ್ದಾರ್ ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ದಲಿತ ಕುಟುಂಬಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಕ್ಯಾತನಹಳ್ಳಿ ನಾಗರಾಜು, ನಿಂಗರಾಜ ಮಲ್ಲಾಡಿ ಮತ್ತಿತರರು ಒತ್ತಾಯಿಸಿದರು.
ಸದರಿ ಭೂಮಿಯೂ ಹುಲ್ಲುಬನಿಯಾಗಿದ್ದು, ಅಕ್ರಮ ಸಕ್ರಮದಡಿ ಮಂಜೂರು ಮಾಡಲು ಅವಕಾಶವಿಲ್ಲವೆಂದು ತಿಳಿದುಬಂದಿದೆ ಎಂದು ತಹಸೀಲ್ದಾರ್ ನರಗುಂದ ತಿಳಿಸಿದರು. ಆದರೆ, ಸದಸ್ಯರು ಒಪ್ಪದಿದ್ದಾಗ, ಮತ್ತೊಮ್ಮೆ ದಾಖಲೆ ಪರಿಶೀಲಿಸುವಂತೆ ಉಪವಿಭಾಗಾಧಿಕಾರಿ ಸೂಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಹಾರಂಗಿ ನಾಲೆಯ ದಡದಲ್ಲಿ ಕಳೆದ 40ವರ್ಷಗಳಿಂದ ವಾಸವಿರುವ 30 ಅಲೆಮಾರಿ ಕುಟುಂಬಗಳಿಗೆ ನಿವೇಶನ ನೀಡಲು ಆಗ್ರಹಿಸಲಾಗಿದೆ ಎಂದು ನಿಂಗರಾಜ ಮಲ್ಲಾಡಿ ತಿಳಿಸಿದಾಗ, ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಈ ಕುಟುಂಬಗಳಿಗೆ ಮಾದಾಪುರ ಸರ್ವೇ ನಂ. 60ರಲ್ಲಿ 1 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಉಪವಿಭಾಗಾಧಿಕಾರಿಗೆ ಸನ್ಮಾನ:
ಕಳೆದ 5-6 ವರ್ಷಗಳಿಂದ ಎಚ್.ಡಿ.ಕೋಟೆ ತಾಲೂಕಿನ ಪಡುವಕೋಟೆ ಕಾವಲ್‌ನ ಪೂವಮ್ಮ ಬಂಗಾರು ಎಂಬ ದಲಿತ ಮಹಿಳೆಯ ಜಮೀನಿನ ವಿವಾದದ ಕುರಿತಂತೆ ಸಂಘಟನೆಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಿ ಭೂಮಿಯ ಮರುಸ್ವಾಧೀನ ಪ್ರಕ್ರಿಯೆಯನ್ನು ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಯಶಸ್ವಿಯಾಗಿ ಸಂಪನ್ನಗೊಳಿಸಿದ್ದಾರೆಂದು ಶ್ಲಾಘಿಸಿ ದಲಿತ ಸಂಘಟನೆಗಳು ಉಪವಿಭಾಗಾಧಿಕಾರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ವಿಷಯವನ್ನು ಪ್ರಸ್ತಾಪಿಸಿದ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ, ದಲಿತರಿಗೆ ಮನೆ, ವಸತಿ, ಬೈಕ್, ಕಾರು ಕೊಡಬಹುದು, ಆದರೆ, ಭೂಮಿಯ ಮರುಸ್ವಾಧೀನದಂತಹ ಕಷ್ಟಕರ ಕಾರ್ಯವನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಯಶಸ್ವಿಯಾಗಿ ನೆರವೇರಿಸುವ ಮೂಲಕ ಉಪವಿಭಾಗ ಮಟ್ಟದಲ್ಲಿ ದಲಿತರ ಮನೋಬಲಕ್ಕೆ ಶಕ್ತಿ ನೀಡಿದ್ದಾರೆ. 5-6 ವರ್ಷಗಳ ಕಾಲ ಮದ್ಯದ ದೊರೆಗಳ ವಿರುದ್ಧದ ದಲಿತ ಸಂಘಟನೆಗಳ ಹೋರಾಟಕ್ಕೆ ಜಯ ಲಭಿಸಿದೆ. ಇಂತಹ ಅಧಿಕಾರಿಗಳು ಇಂದು ಅವಶ್ಯವಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ದಲಿತರ ಸ್ಮಶಾನದ ಸಮಸ್ಯೆ, ನಿವೇಶನಗಳ ಸಮಸ್ಯೆ, ಭೂ ಸಮಸ್ಯೆ, ಹಾಸ್ಟೆಲ್ ಸಮಸ್ಯೆ ಮುಂತಾದ ಸಮಸ್ಯೆಗಳ ಕುರಿತು ಸದಸ್ಯರು ಚರ್ಚಿಸಿರು. ಸಮಿತಿಯ ಸದಸ್ಯರಾದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕ್ಯಾತನಹಳ್ಳಿ ನಾಗರಾಜ್, ಡಿವೈಎಸ್‌ಪಿ ಗೋಪಾಲಕೃಷ್ಣ, ಹುಣಸೂರು ತಹಸೀಲ್ದಾರ್ ಜೆ.ಮಂಜುನಾಥ್, ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್, ಪಿರಿಯಾಪಟ್ಟಣ ತಹಸೀಲ್ದಾರ್ ನಿಸರ್ಗಪ್ರಿಯ, ಕೆ.ಆರ್. ನಗರ ತಹಸೀಲ್ದಾರ್ ಸುರೇಂದ್ರಮೂರ್ತಿ, ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಅಬಕಾರಿ ಡಿವೈಎಸ್‌ಪಿ ಮೋಹನ್ ಕುಮಾರ್, ಹುಣಸೂರು ಇ.ಒ ಹೊಂಗಯ್ಯ, ನಗರಸಭೆ ಆಯುಕ್ತೆ ಮಾನಸ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ ಇದ್ದರು.