ಸಿದ್ದಾಪುರ: ಕಾಡಂಚಿನಲ್ಲಿರುವ ಬಸವನಹಳ್ಳಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕಂಬಳಿ ಹುಳಗಳ ಹಾವಳಿ ಹೆಚ್ಚಾಗಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆಯ ಮೂರು ಕಟ್ಟಡಗಳ ಪೈಕಿ ಎರಡು ಕಟ್ಟಡಗಳಲ್ಲಿ ಹುಳಗಳ ಹಾವಳಿ ಹೆಚ್ಚಾಗಿದ್ದು,ಊಟ, ನಿದ್ರೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಹುಳಗಳು ದಿನ ಕಳೆಯುತ್ತಿದ್ದಂತೆ ಕಟ್ಟಡದ ಗೋಡೆಗಳಲ್ಲಿ ತುಂಬಿ ಹೋಗಿವೆ. ವಿದ್ಯಾರ್ಥಿಗಳ ಹಾಸ್ಟೆಲ್ನ ಛಾವಣಿ, ನೆಲ, ಹಾಸಿಗೆಯಲ್ಲಿ ಹರಿದಾಡುತ್ತಿದ್ದು, ಇದು ಶಿಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿತ್ತು. ವಾರಗಳ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಸಿಬ್ಬಂದಿ ಶಾಲೆಯ ಛಾವಣಿ, ಕಟ್ಟಡಗಳಿಗೆ ಔಷಧ ಸಿಂಪಡಿಸಿದ್ದರು. ಆ ಬಳಿಕ ಕೈಲ್ ಮುಹೂರ್ತ, ಗೌರಿ ಗಣೇಶ ಹಬ್ಬದ ರಜೆ ಇದ್ದ ಕಾರಣ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೆ ದಾಳಿ ಮಾಡಿರುವ ಕಂಬಳಿ ಹುಳಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿ ಸಿಬ್ಬಂದಿಯನ್ನು ಕರತಂದು ಶಾಲಾ ಕಟ್ಟಡಗಳಿಗೆ ಔಷಧ ಸಿಂಪಡಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬಂದಿರಲಿಲ್ಲ. ಹಾಗಾಗಿ ಔಷಧ ಸಿಂಪಡಿಸಿ ಮೇಲಧಿಕಾರಿಗಳ ನಿರ್ದೇಶನದಂತೆ ಶುಚಿತ್ವಕ್ಕೆ ಮುಂದಾಗಿದ್ದೇವೆ ಎಂದು ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ ತಿಳಿಸಿದ್ದಾರೆ.